ADVERTISEMENT

ಬಿಜೆಪಿಗೆ ಮತ್ತೆ ಮೆಹಬೂಬಾ ಷರತ್ತು

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2016, 19:42 IST
Last Updated 2 ಫೆಬ್ರುವರಿ 2016, 19:42 IST
ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ  ಅವರನ್ನು ಮಂಗಳವಾರ ಭೇಟಿ ಮಾಡಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಅವರನ್ನು ಮಂಗಳವಾರ ಭೇಟಿ ಮಾಡಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ   

ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಕುರಿತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇನ್ನೂ ಮೌನವಹಿಸಿದ್ದಾರೆ. ಆದರೆ ಮೈತ್ರಿ ಪಕ್ಷ ಬಿಜೆಪಿಗೆ ಕೆಲ ಷರತ್ತು ವಿಧಿಸಿದ್ದಾರೆ. ಆದರೆ ಇದೇ ವೇಳೆ ಬಿಜೆಪಿ ಸಹ ಪಿಡಿಪಿಯೇ ಸರ್ಕಾರ ರಚನೆಗೆ ಮೊದಲ ಹೆಜ್ಜೆ ಇಡಬೇಕು ಎಂದು ಹೇಳಿದೆ.

ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ಶಾಂತಿ ಸ್ಥಾಪನೆ ಸೇರಿದಂತೆ ಮೈತ್ರಿ ಪಕ್ಷ ಬಿಜೆಪಿಗೆ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಫ್ತಿ ಹೇಳಿದ್ದಾರೆ.

ನಿಲುವು ಸ್ಪಷ್ಟಪಡಿಸಲು ರಾಜ್ಯಪಾಲ ಎನ್.ಎನ್.ವೋಹ್ರಾ  ಅವರು ಮುಫ್ತಿ ಅವರನ್ನು ಆಹ್ವಾನಿಸಿದ್ದರು. ಭೇಟಿ  ನಂತರ ಮಾತನಾಡಿದ ಮುಫ್ತಿ, ತಮ್ಮ ರಾಜ್ಯವು ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. ಹೊಸ ಸರ್ಕಾರ ರಚನೆಯಾದರೆ ಉತ್ತಮ ವಾತಾವರಣ, ಆರ್ಥಿಕ ಬೆಳವಣಿಗೆ ಮತ್ತಿತರ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ತಮ್ಮ ರಾಜಕೀಯ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳದೆ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿಕೊಂಡರು. ರಾಜ್ಯದಲ್ಲಿನ ಸಂಕಷ್ಟವನ್ನು ಕೇಂದ್ರ ಸರ್ಕಾರ ನಿವಾರಣೆ ಮಾಡಲಿದೆ ಎಂಬ ಭರವಸೆಯನ್ನು ಅವರು ಹೊಂದಿದ್ದರು ಎಂದು ಮೆಹಬೂಬಾ ಹೇಳಿದರು.

ಸಯೀದ್ ಅವರು ಜನವರಿ 7 ರಂದು ಮೃತಪಟ್ಟರು. ಆನಂತರ ರಾಜ್ಯದಲ್ಲಿ  ರಾಜಕೀಯ ಅಸ್ಥಿರತೆ ನೆಲೆಸಿದೆ. ಇದನ್ನು ಅಂತ್ಯಗೊಳಿಸುವ ಉದ್ದೇಶದಿಂದ ರಾಜ್ಯಪಾಲರು ಮೆಹಬೂಬಾ ಅವರನ್ನು ಆಹ್ವಾನಿಸಿದ್ದರು.

‘ಜಮ್ಮು ಮತ್ತು ಕಾಶ್ಮೀರ ಭಿನ್ನ ರಾಜ್ಯ. ಅಲ್ಲಿ ನಾನಾ ರೀತಿಯ ಸವಾಲುಗಳಿವೆ. ಇಲ್ಲಿ ಹಲವು ಒತ್ತಡಗಳಿವೆ. ಅವುಗಳನ್ನು ನಿವಾರಿಸಬೇಕಿದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರ ನಮ್ಮೊಂದಿಗೆ ಇರಬೇಕು’  ಎಂದು ಮೆಹಬೂಬಾ ಹೇಳಿದರು. 

ಕಳೆದ ವರ್ಷ ಎರಡೂ ಪಕ್ಷಗಳು ‘ಮೈತ್ರಿಯ ಕಾರ್ಯಸೂಚಿ’ಯ ಬಗ್ಗೆ   ನಿರ್ಧಾರಕ್ಕೆ ಬಂದಿದ್ದಾಗಿ ಮೆಹಬೂಬಾ ತಿಳಿಸಿದರು.  ಪಿಡಿಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ ನಂತರವೇ ಬಿಜೆಪಿ ತನ್ನ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್‌ ಹೇಳಿದರು.  ಭೇಟಿ ವೇಳೆ ಮೆಹಬೂಬಾ ಅವರೊಂದಿಗೆ ಪಕ್ಷದ ಹಿರಿಯ ಸದಸ್ಯರಾದ ಮುಜಫರ್‌ ಬೇಗ್‌ ಮತ್ತಿತರರು ಇದ್ದರು.

***
ಮೈತ್ರಿ ಮುಂದುವರಿಯಬೇಕು. ರಾಜ್ಯದ ಅಭಿವೃದ್ಧಿಗೆ ಮೋದಿ ಹಾಗೂ ಮಹಬೂಬಾ ಅವರು ತಮ್ಮದೇ ಆದ ದೂರದೃಷ್ಟಿ ಹೊಂದಿದ್ದಾರೆ.
-ನಿರ್ಮಲ್‌ ಸಿಂಗ್,
ಮಾಜಿ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.