ADVERTISEMENT

ಬಿಜೆಪಿ ಮುಖಂಡ ವಿಜಯ್ ಪಂಡಿತ್ ಹತ್ಯೆ

ಸಿಬಿಐ ತನಿಖೆಗೆ ಸಂಸದರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 19:30 IST
Last Updated 8 ಜೂನ್ 2014, 19:30 IST

ಸಿಗ್ರೇಟರ್‌ ನೊಯಿಡಾ (ಪಿಟಿಐ): ದಾದ್ರಿ ನಗರ ಪಂಚಾಯಿತ್ ಅಧ್ಯಕ್ಷೆ ಗೀತಾ ಪಂಡಿತ್ ಅವರ ಪತಿ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸ­ಬೇಕು ಎಂದು ಬಿಜೆಪಿ ಸಂಸದ ಮಹೇಶ್‌ ಶರ್ಮಾ ಮತ್ತು ಪಂಡಿತ್ ಕುಟುಂಬದ ಸದಸ್ಯರು ಆಗ್ರಹಪಡಿಸಿದ್ದಾರೆ. 

ಈ ಕುರಿತು ಶರ್ಮಾ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಮಾತನಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆ­ಗಾಗಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕೊಲೆಯ ಹಿನ್ನೆಲೆಯಲ್ಲಿ ಗೌತಮ್ ಬುದ್ಧ ನಗರ ಜಿಲ್ಲೆಯ ದಾದ್ರಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಶನಿವಾರ ರಾತ್ರಿ ನಾಲ್ವರು ದುಷ್ಕರ್ಮಿ­ಗಳು ವಿಜಯ್ ಪಂಡಿತ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ನಂತರ ಉದ್ರಿಕ್ತಗೊಂಡ ಪಂಡಿತ್‌ ಬೆಂಬಲಿ­ಗರು 16 ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಪಂಡಿತ್ ಬೆಂಬಲಿಗರು ಮತ್ತು ವಿರೋಧಿ ಗುಂಪುಗಳ ಮಧ್ಯೆ ಮಧ್ಯ ರಾತ್ರಿಯವರೆಗೂ ಘರ್ಷಣೆ ನಡೆಯಿತು ಎನ್ನಲಾಗಿದೆ.
ಹೆದ್ದಾರಿ ಬಂದ್‌: ಕೊಲೆಗಾರರನ್ನು  ಬಂಧಿಸಬೇಕು ಎಂದು ಆಗ್ರಹಪಡಿಸಿ ಬಿಜೆಪಿ ಕಾರ್ಯಕರ್ತರು ದಾದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದರು.

ಪಂಡಿತ್‌ ಕುಟುಂಬದ ಸದಸ್ಯರು ಕೆಲವರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿ­ಕಾರಿ ವಿ. ರಾಜಮೌಳಿ ತಿಳಿಸಿದ್ದಾರೆ.

ಅಂತ್ಯಕ್ರಿಯೆ: ಬಿಗಿ ಭದ್ರತೆಯ ಮಧ್ಯೆ ವಿಜಯ್ ಪಂಡಿತ್ ಅವರ ಅಂತ್ಯಕ್ರಿಯೆ­ಯನ್ನು ಭಾನುವಾರ ಮಧ್ಯಾಹ್ನ ನಡೆಸಲಾಯಿತು.
ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿ­ಗಳು ಶವವನ್ನು ಮೆರವ­ಣಿಗೆಯಲ್ಲಿ ರುದ್ರಭೂಮಿಗೆ ಒಯ್ದರು. ಪ್ರಾಂತೀಯ ಸೇನೆಯ ಬಿಗಿ ಭದ್ರತೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

‘ರಾಜಕೀಯ ದ್ವೇಷಕ್ಕಾಗಿ ಕೊಲೆ’
ಚುನಾವಣೆ ದ್ವೇಷದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ನರಿಂದರ್‌ ಭಾಟಿ ಆದೇಶದಂತೆ ತಮ್ಮ ಪತಿಯ ಹತ್ಯೆ ನಡೆದಿದೆ ಎಂದು ಗೀತಾ ಪಂಡಿತ್‌ ಆಪಾದಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೆಲವು ಗೂಂಡಾಗಳು ಮತ್ತು ಸಮಾಜವಾದಿ ಪಕ್ಷಗಳಿಂದ ಲಾಭ ಪಡೆದ ಗುತ್ತಿಗೆದಾರರು ದೂರವಾಣಿ ಕರೆ ಮಾಡಿ ಬಿಜೆಪಿ ಅಭ್ಯರ್ಥಿ ಮಹೇಶ್‌ ಶರ್ಮಾ ಪರ ಪ್ರಚಾರ ಮಾಡಿದರೆ ತಮ್ಮನ್ನು ಮತ್ತು ಪತಿಯನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು.

ಇದಾದ ನಂತರ ನರಿಂದರ್‌ ಭಾಟಿ ಸಹ ಪೋನ್ ಮಾಡಿ ಬೆದರಿಕೆ ಹಾಕಿದ್ದರು ಎಂದು ಅವರು ಹೇಳಿದ್ದಾರೆ. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ತೆಗೆದು­ಕೊಳ್ಳದೆ ಇದ್ದುದರಿಂದ ತಮ್ಮ ಪತಿಯ ಹತ್ಯೆ ಆಗಿದೆ ಎಂದು ಗೀತಾ ದೂರಿದ್ದಾರೆ.

ದುಷ್ಕರ್ಮಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಮುಖ್ಯಂಮತ್ರಿ ಅಖಿಲೇಶ್ ಯಾದವ್ ಭರವಸೆ ನೀಡಿದ್ದಾರೆ. ಕೊಲೆಗಾರರನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆಗೆ ವಿಶೇಷ ಕಾರ್ಯಪಡೆಯನ್ನೂ ರಚಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ  ದೇವೇಂದ್ರ ಚೌಹಾಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT