ADVERTISEMENT

ಬಿದಿರು ಕಟಾವು, ಸಾಗಾಟ ಸುಲಭ

ಅರಣ್ಯ ಕಾಯ್ದೆಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 20:06 IST
Last Updated 23 ನವೆಂಬರ್ 2017, 20:06 IST
ಬಿದಿರು ಕಟಾವು, ಸಾಗಾಟ ಸುಲಭ
ಬಿದಿರು ಕಟಾವು, ಸಾಗಾಟ ಸುಲಭ   

ನವದೆಹಲಿ: ದೇಶದಲ್ಲಿ ಬಿದಿರು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ‘ಭಾರತೀಯ ಅರಣ್ಯ ಕಾಯ್ದೆ–1927’ಕ್ಕೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ.

‘ಈಗ ಕಾಯ್ದೆಯ ಅನ್ವಯ ಬಿದಿರನ್ನು ಮರ ಎಂದು ಪರಿಗಣಿಸಲಾಗುತ್ತದೆ. ರೈತರು ತಾವೇ ಬೆಳೆದ ಮತ್ತು ಅವರ ಹೊಲದಲ್ಲಿ ಬೆಳೆದ ಬಿದಿರನ್ನು ಕಡಿಯಲು ಅನುಮತಿ ಹಾಗೂ ಸಾಗಾಟಕ್ಕೆ ಪರವಾನಗಿ ಪಡೆದುಕೊಳ್ಳಬೇಕು. 2011ರಲ್ಲಿ ಕೆಲವು ರಾಜ್ಯಗಳು ಬಿದಿರನ್ನು ‘ಅರಣ್ಯ ಲಘು ಉತ್ಪನ್ನ’ ಎಂದು ಘೋಷಿಸಿವೆ.

ಇದರಿಂದ ಆಯಾ ರಾಜ್ಯಗಳ ಒಳಗೆ ಬಿದಿರನ್ನು ಸಾಗಿಸಲು ಹೆಚ್ಚು ಅಡೆತಡೆ ಇಲ್ಲ. ಆದರೆ ಅಂತರರಾಜ್ಯ ಸಾಗಾಟಕ್ಕೆ ಹಲವು ಇಲಾಖೆಗಳಿಂದ ಅನುಮತಿ ಮತ್ತು ಪರವಾನಗಿ ಪಡೆದುಕೊಳ್ಳಬೇಕಿದೆ. ಹೀಗಾಗಿ ಬಿದಿರು ಕೃಷಿ ಭಾರತದಲ್ಲಿ ಇನ್ನೂ ವಾಣಿಜ್ಯ ಸ್ವರೂಪ ಪಡೆದಿಲ್ಲ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಬಿದಿರನ್ನು ಕಡಿಯಲು ಮತ್ತು ಸಾಗಾಟ ಮಾಡಲು ಈ ತಿದ್ದುಪಡಿ ಕಾಯ್ದೆಯು ಅನುವು ಮಾಡಿಕೊಡುತ್ತದೆ. ತಿದ್ದುಪಡಿಯನ್ನು ಸಂಸತ್ತು ಅಂಗೀಕರಿಸಿದ ನಂತರ ಈ ನಿರ್ಬಂಧಗಳು ಸಡಿಲವಾಗಲಿವೆ. ಇದರಿಂದ ರೈತರು ಬಿದಿರನ್ನು ಮುಖ್ಯಬೆಳೆಯಾಗಿ ಮತ್ತು ಉಪಬೆಳೆಯಾಗಿಯೂ ಬೆಳೆಯಬಹುದು. ಇದರಿಂದ ರೈತರ ಆದಾಯ ಹೆಚ್ಚುತ್ತದೆ’ ಎಂದು ಮೂಲಗಳು ವಿವರಿಸಿವೆ.

‘ಬಿದಿರಿನ ಇಳುವರಿ ಹೆಚ್ಚಿದರೆ, ಅದನ್ನು ಕಚ್ಚಾವಸ್ತುವಾಗಿ ಬಳಸುವ ಗುಡಿ ಕೈಗಾರಿಕೆಗಳು ಹೆಚ್ಚಾಗಲಿವೆ. ಬಿದಿರಿನ ಪೀಠೋಪಕರಣ, ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಲಿದೆ. ಒಟ್ಟಾರೆ ಇದು ಉದ್ಯೋಗಾವಕಾಶ ಮತ್ತು ರೈತರ ಆದಾಯವನ್ನು ಹೆಚ್ಚಿಸಲಿದೆ’ ಎಂದು ಮೂಲಗಳು ಹೇಳಿವೆ.

ಲಾಭ ಏನು
ಬಿದಿರು ಕೃಷಿಗೆ ಉತ್ತೇಜನ, ವಾಣಿಜ್ಯ ರೂಪ ನೀಡಲು ಕ್ರಮ.
ಕಟಾವು ಮತ್ತು ಸಾಗಾಟಕ್ಕೆ ಅನುಮತಿ ಮತ್ತು ಪರವಾನಗಿ ಬೇಕಾಗುವುದಿಲ್ಲ.
ಗುಡಿ ಕೈಗಾರಿಕೆಗಳಿಂದ ಉದ್ಯೋಗಾವಕಾಶ ಹೆಚ್ಚಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.