ADVERTISEMENT

ಬಿಯಾಸ್‌ ನದಿಯಲ್ಲಿ ಕೊಚ್ಚಿ ಹೋದ 24 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 20:07 IST
Last Updated 8 ಜೂನ್ 2014, 20:07 IST

ಶಿಮ್ಲಾ/ಮಂಡಿ (ಪಿಟಿಐ): ಮನಾಲಿ–-ಕಿರತ್‌ಪುರ ಹೆದ್ದಾರಿಯಲ್ಲಿ ಥಾಲೊಟ್‌ ಸಮೀಪ ಬಿಯಾಸ್‌ ನದಿಯಲ್ಲಿ ಹೈದರಾಬಾದ್‌ನ  ಸುಮಾರು 24 ವಿದ್ಯಾರ್ಥಿಗಳು ಭಾನುವಾರ ಸಂಜೆ 7 ಗಂಟೆ ಹೊತ್ತಿಗೆ ಕೊಚ್ಚಿ ಹೋಗಿದ್ದಾರೆ. ವಿಎನ್‌ಆರ್‌ ವಿಜ್ಞಾನ ಜ್ಯೋತಿ ಇನ್ಸ್‌ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹಿಮಾಚಲ ಪ್ರದೇಶ ಪ್ರವಾಸಕ್ಕಾಗಿ ಬಂದಿದ್ದರು. 

ಕೆಲವು ವಿದ್ಯಾರ್ಥಿನಿಯರು ಸೇರಿದಂತೆ ವಿದ್ಯಾರ್ಥಿಗಳು ನದಿ ದಂಡೆಯಲ್ಲಿ ನಿಂತು ಫೋಟೊ ತೆಗೆಯುತ್ತಿದ್ದರು. ಅದೇ ವೇಳೆ ಲಾರ್ಜಿ ಜಲವಿದ್ಯುತ್‌ ಯೋಜನೆಯ ಜಲಾ­ಶ­ಯ­­ದಿಂದ ಹಠಾತ್ತಾಗಿ ನದಿಗೆ ನೀರು ಬಿಡಲಾಗಿದೆ. ಒಮ್ಮೆಲೆ ನುಗ್ಗಿ ಬಂದ ನೀರಿನಲ್ಲಿ ದಡದಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಕೊಚ್ಚಿ ಹೋದರು.  ಅಧಿಕೃತ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ 18 ವಿದ್ಯಾರ್ಥಿಗಳು ಮತ್ತು ಆರು ವಿದ್ಯಾರ್ಥಿನಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಯಾವುದೇ ಮುನ್ನೆಚ್ಚರಿಕೆ ನೀಡದೆ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಕ್ಷಣವೇ ತೀವ್ರ ಪ್ರಮಾಣದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ವಿದ್ಯಾರ್ಥಿಗಳ ಯಾವುದೇ ಸುಳಿವು ದೊರೆತಿಲ್ಲ.

ಕೊಚ್ಚಿ ಹೋಗಿರುವ ವಿದ್ಯಾರ್ಥಿಗಳು ಜೀವಂತವಾಗಿ ಸಿಗುವ ಸಾಧ್ಯತೆ ಬಹಳ ಕಡಿಮೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನುರಿತ ಈಜುಗಾರರು ವಿದ್ಯಾರ್ಥಿಗಳ ಶೋಧದಲ್ಲಿ ತೊಡಗಿದ್ದಾರೆ. ನದಿ ದಂಡೆಗೆ ಹೋಗದ ಸುಮಾರು 20 ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಆದರೆ ಅವರೆಲ್ಲವೂ ಆಘಾತಗೊಂಡಿದ್ದಾರೆ.

ನದಿಯ ಕೆಳಭಾಗದಲ್ಲಿ ಎರಡೂ ದಂಡೆಗಳಲ್ಲಿ ವಾಸಿಸುವ ಜನರಿಗೆ ಯಾವುದೇ ಸುಳಿಸು ಸಿಕ್ಕರೆ ತಕ್ಷಣವೇ ತಿಳಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಹೆತ್ತವರು ಮತ್ತು ಗೆಳೆಯರು ಆಘಾತಗೊಂಡಿದ್ದು ತಮ್ಮವರ ಮಾಹಿತಿಗಾಗಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.