ADVERTISEMENT

ಬಿಸಿಗಾಳಿಗೆ 1,412 ಬಲಿ

ಆಂಧ್ರ, ತೆಲಂಗಾಣದಲ್ಲಿ ಈವರೆಗೆ 1360 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ನವದೆಹಲಿ (ಪಿಟಿಐ): ದೇಶದ ಹಲವು ಭಾಗದಲ್ಲಿ ಬಿಸಿಗಾಳಿ ಮುಂದುವರಿದಿದ್ದು,  ಬಿಸಿಲಿನ ತಾಪಕ್ಕೆ ಮೃತಪಟ್ಟವರ ಸಂಖ್ಯೆ ಬುಧವಾರ 1,412ಕ್ಕೆ ಏರಿದೆ.

ಬಿಸಿಗಾಳಿಗೆ ತತ್ತರಿಸಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಹೆಚ್ಚಿನ ಸಾವು ಸಂಭವಿಸಿದ್ದು, ಬುಧವಾರದವರೆಗೆ ಎರಡೂ ರಾಜ್ಯಗಳಲ್ಲಿ ಸತ್ತವರ ಸಂಖ್ಯೆ 1,360 ರಷ್ಟಾಗಿದೆ.  ಆಂಧ್ರಪ್ರದೇಶದಲ್ಲಿ ಈವರೆಗ ಒಟ್ಟು 1020 ಮಂದಿ ಮೃತಪಟ್ಟಿದ್ದರೆ, ತೆಲಂಗಾಣದಲ್ಲಿ ಒಟ್ಟು 340 ಜನರು ಬಲಿಯಾಗಿದ್ದಾರೆ.

ಹೆಚ್ಚು ಹೊತ್ತು ಬಿಸಿಲಿನಲ್ಲಿದ್ದುದರಿಂದ ಹಲವು ಮಂದಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರಾವಳಿ ಪ್ರದೇಶ  ಮತ್ತು ತೆಲಂಗಾಣದಲ್ಲಿ ಇನ್ನೂ ಎರಡು ದಿನ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಹೈದರಾಬಾದ್ ಕೇಂದ್ರದ ನಿರ್ದೇಶಕ ವೈ.ಕೆ.ರೆಡ್ಡಿ ತಿಳಿಸಿದ್ದಾರೆ.

ಉತ್ತರ ಭಾರತದಲ್ಲೂ ಬಿಸಿಗಾಳಿ ಮುದುವರಿದಿದೆ. ಒಡಿಶಾದಲ್ಲಿ ಬಿಸಿಲಿನ ತಾಪಕ್ಕೆ ಈವರೆಗೆ 43 ಮಂದಿ ಬಲಿಯಾಗಿದ್ದಾರೆ. ಗುಜರಾತ್‌ನಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ಆಗ್ರಾದಲ್ಲಿ ಗರಿಷ್ಠ 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಪಂಜಾಬ್ ಮತ್ತು ಹರಿಯಾಣದ ಹಲವು ಪ್ರದೇಶಗಳಲ್ಲಿ ಗರಿಷ್ಠ 41ರಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.