ADVERTISEMENT

ಬೆಂಗಳೂರಿನಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 10:02 IST
Last Updated 25 ಮೇ 2017, 10:02 IST
ಬೆಂಗಳೂರಿನಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ
ಬೆಂಗಳೂರಿನಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ   

ಬೆಂಗಳೂರು: ಬೆಂಗಳೂರಿನಲ್ಲಿ ನಕಲಿ ಗುರುತಿನ ವಿಳಾಸ ಬಳಸಿ ವಾಸಿಸುತ್ತಿದ್ದ ಮೂವರು ಪಾಕ್ ಪ್ರಜೆಗಳನ್ನು ಬಂಧಿಸಲಾಗಿದೆ.ಇದರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ. ಪಾಕಿಸ್ತಾನದ ಈ ಪ್ರಜೆಗಳಿಗೆ ಸಹಾಯ ಮಾಡುತ್ತಿದ್ದ ಓರ್ವ ಭಾರತೀಯನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇವರ ಬಳಿಯಲ್ಲಿದ್ದ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ಚೀಟಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಪಾಕ್ ಪ್ರಜೆಗಳನ್ನು ಸಮೀರಾ, ಕಾಶಿಫ್ ಶಂಸುದ್ದೀನ್ ಮತ್ತು ಕಿರಣ್ ಗುಲಾಂ ಅಲಿ ಎಂದು ಗುರುತಿಸಲಾಗಿದೆ. ಇವರಿಗೆ ಸಹಾಯ ಮಾಡುತ್ತಿದ್ದ ಮೊಹಮ್ಮದ್ ಶಹೀಬಾ ಎಂಬಾತ ಕೇರಳ ಮೂಲದವನಾಗಿದ್ದಾನೆ.

ADVERTISEMENT

ಆಪಾರ್ಟ್‍ಮೆಂಟ್‍ನಲ್ಲಿ ಪಾಕಿಸ್ತಾನಿ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದರಿಂದ ಪೊಲೀಸರು ಆ ಅಪಾರ್ಟ್‍ಮೆಂಟ್‍ಗೆ ದಾಳಿ ನಡೆಸಿ ಇವರನ್ನು ಬಂಧಿಸಿದ್ದಾರೆ. ಆದರೆ ತಾವು ಪ್ರಣಯ ಜೋಡಿಗಳೆಂದು ಪಾಕ್ ಪ್ರಜೆಗಳು ಹೇಳಿದ್ದಾರೆ.

ಬಂಧಿತರಾದ ನಾಲ್ವರು ಕತಾರ್‍‍ನಲ್ಲಿ ಪರಿಚಿತರಾಗಿದ್ದರು. ಅಲ್ಲಿ ಶಹೀಬಾ ಪಾಕಿಸ್ತಾನದ ಹುಡುಗಿ ಕಿರಣ್ ಗುಲಾಂ ನಡುವೆ ಪ್ರೇಮಾಂಕುರವಾಗಿತ್ತು. ಈ ಸಂಬಂಧಕ್ಕೆ ಕುಟುಂಬದವರು ವಿರೋಧ ಸೂಚಿಸಿದ ಕಾರಣ ಈ ಜೋಡಿ ಬೆಂಗಳೂರಿಗೆ ಬಂದು ನೆಲೆಸಿತ್ತು. ಇವರು ಭಾರತಕ್ಕೆ ಬರುವಾಗ ಪಾಕಿಸ್ತಾನದ ದಂಪತಿಯೂ ಜತೆಗೆ ಬಂದಿದ್ದರು. ಪಾಕಿಸ್ತಾನದಲ್ಲಿ ಪ್ರೇಮ ವಿವಾಹಕ್ಕೆ ವಿರೋಧ ಸೂಚಿಸಿದ್ದರಿಂದ ಸಮೀರಾ- ಕಾಶಿಫ್ ಶಂಸುದ್ದೀನ್ ಎಂಬ ಜೋಡಿ ಶಹೀಬಾ- ಕಿರಣ್ ಜತೆ ಭಾರತಕ್ಕೆ ಬಂದಿದ್ದರು ಎನ್ನಲಾಗುತ್ತಿದೆ.

ಇದರಲ್ಲಿ ಮೂವರು ಪಾಕಿಸ್ತಾನಿಗಳು ಮೊದಲು ನೇಪಾಳಕ್ಕೆ ಬಂದು ಅಲ್ಲಿಂದ ಕಳೆದ ವರ್ಷ ಭಾರತಕ್ಕೆ ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇಲ್ಲಿಗೆ ಬಂದ ನಂತರ ಇವರು ಆಧಾರ್ ಸೇರಿದಂತೆ ಪಾಸ್‍ಪೋರ್ಟ್ ಕೂಡಾ ಪಡೆದುಕೊಂಡಿದ್ದಾರೆ.

ವಿದೇಶಿ ಕಾಯ್ದೆ ಸೇರಿದಂತೆ ಭಾರತದ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.