ADVERTISEMENT

ಬ್ಯಾಂಕ್‌ಗೆ ವಂಚನೆ ಯತ್ನ: ಮ್ಯಾನೇಜರ್‌ಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:38 IST
Last Updated 24 ಮಾರ್ಚ್ 2017, 20:38 IST

ಚೆನ್ನೈ: ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಓರಿಯೆಂಟಲ್ ಬ್ಯಾಂಕ್ ಆಫ್‌ ಕಾಮರ್ಸ್‌ಗೆ ವಂಚಿಸಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ, ಬ್ಯಾಂಕ್‌ನ ಬೆಂಗಳೂರಿನ ಯಲಹಂಕ ಶಾಖೆಯ ಮ್ಯಾನೇಜರ್‌ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್‌ಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಮಲೇಷ್ಯಾದ ಕಂಪೆನಿಯೊಂದಕ್ಕೆ ₹ 9.7 ಕೋಟಿ ಹಣ ಪಾವತಿಸುವಂತೆ 2000ರಲ್ಲಿ ಬ್ಯಾಂಕ್‌ನ ಯಲಹಂಕ ಶಾಖೆಯಿಂದ, ಚೆನ್ನೈನಲ್ಲಿರುವ ಸಾಗರೋತ್ತರ ಶಾಖೆಗೆ ಆದೇಶ ರವಾನೆ ಮಾಡಲಾಗಿತ್ತು. ಬ್ಯಾಂಕ್‌ನ ಶಾಖೆಯ ಅಂದಿನ ಮ್ಯಾನೇಜರ್‌ ಕೆ. ಸಂಜೀವ ಶೆಟ್ಟಿ ತಮ್ಮ ಸಹೋದ್ಯೋಗಿಗಳ ಸಹಿಯನ್ನು ನಕಲು ಮಾಡಿ ಈ ಆದೇಶ ಸೃಷ್ಟಿಸಿದ್ದರು.

ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್ ಶಬೀರ್‌ ಅಹ್ಮದ್ ಮತ್ತು ಇತರ ಏಳು  ಮಂದಿ ಸೇರಿ, ಆ ಆದೇಶಕ್ಕೆ ಪೂರಕವಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದರು. ಆದರೆ ಈ ಸಂಚು ಬಯಲಾದ್ದರಿಂದ, ವಂಚನೆ ಪ್ರಯತ್ನ ವಿಫಲವಾಗಿತ್ತು.

ಸಿಬಿಐ ವಿಶೇಷ ನ್ಯಾಯಾಲಯವು, ಸಂಜೀವ ಶೆಟ್ಟಿ, ಶಬೀರ್ ಅಹ್ಮದ್ ಮತ್ತೊಬ್ಬನಿಗೆ ಐದು ವರ್ಷ, ರವಿ ಎಂಬಾತನಿಗೆ 10 ವರ್ಷ ಹಾಗೂ ಮತ್ತೊಬ್ಬನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಉಳಿದವರನ್ನು ಖುಲಾಸೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.