ADVERTISEMENT

ಭತ್ತ, ಹತ್ತಿ ಖರೀದಿ ಬೆಲೆ ಕುಸಿತ: ಕೋಲಾಹಲ

ರಾಜ್ಯಸಭೆಯಲ್ಲಿ ಕೈಜೋಡಿಸಿದ ವಿರೋಧ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2014, 19:30 IST
Last Updated 1 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಭತ್ತ ಮತ್ತು ಹತ್ತಿ ಖರೀದಿ ಬೆಲೆ ಕುಸಿತ ಸೋಮವಾರ ರಾಜ್ಯಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಹತ್ತಿ ಹಾಗೂ ಭತ್ತಗಳ ಕನಿಷ್ಠ ಬೆಂಬಲ ಬೆಲೆ  ಇಳಿಸಿರುವ  ಸರ್ಕಾರದ ಕ್ರಮ­ವನ್ನು ಖಂಡಿಸಿ ಕಾಂಗ್ರೆಸ್‌ ಹಾಗೂ ಸಮಾ­ಜ­ವಾದಿ ಪಕ್ಷಗಳ  ನೇತೃತ್ವದಲ್ಲಿ ವಿರೋಧ ಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ತೆರಳಿ ಪ್ರತಿಭಟನೆ ನಡೆಸಿದ ಕಾರಣ  ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.

ಪ್ರತಿ ಕ್ವಿಂಟಲ್‌ ಹತ್ತಿ ಖರೀದಿ ಬೆಲೆ ಏಳು ಸಾವಿರದಿಂದ ಮೂರು ಸಾವಿರಕ್ಕೆ ಕುಸಿ­ದ ಕಾರಣ ರೈತರು  ಆತ್ಮಹತ್ಯೆಗೆ ಮುಂದಾ­ಗಿದ್ದಾರೆ. ರೈತ ವಿರೋಧಿ ಕೇಂದ್ರ ಸರ್ಕಾ­ರ ಅಧಿಕಾರದಲ್ಲಿ  ಮುಂದುವರಿ­ಯಲು ಬಿಡುವುದಿಲ್ಲ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು.

ಬೆಲೆ ಇಳಿಕೆ ವಿಷಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಬಿಸಿ ಚರ್ಚೆಗೂ ನಾಂದಿ ಹಾಡಿತು.
ಕೈಜೋಡಿಸಿದ ಶತ್ರುಗಳು: ಬದ್ಧ ರಾಜಕೀಯ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ತಮಿ­ಳು ಮೀನುಗಾರರ ಹಿತಾಸಕ್ತಿ ರಕ್ಷಣೆಗಾಗಿ ಪರಸ್ಪರ ವೈರತ್ವ ಮರೆತು ಕೈಜೋಡಿಸಿದ ಅಪ­ರೂಪದ ಘಟನೆಗೆ ರಾಜ್ಯಸಭೆ ಸಾಕ್ಷಿ­ಯಾಯಿತು.

ಶ್ರೀಲಂಕಾ ಸರ್ಕಾರ ಇತ್ತೀಚೆಗೆ ಬಂಧಿಸಿದ 14 ತಮಿಳು ಮೀನುಗಾರರ ಬಿಡು­ಗಡೆಗೆ ಯತ್ನಿಸು ವಂತೆ ಎರಡೂ ಪಕ್ಷಗಳ ಸಂಸದರು ಪಕ್ಷಭೇದ ಮರೆತು ಸರ್ಕಾರವನ್ನು ಒತ್ತಾಯಿಸಿ ದರು. ಚಂದ್ರಶೇಖರ್‌ ಪುತ್ರನಿಗೆ ನೋಟಿಸ್‌:  ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ನೀರಜ್ ಶೇಖರ್ ಅವರಿಗೆ ಅಧಿಕೃತ ನಿವಾಸವನ್ನು ತೆರವು­ಗೊಳಿಸುವಂತೆ ಸರ್ಕಾರ ನೋಟಿಸ್‌ ನೀಡಿರುವ ವಿಷಯ ರಾಜ್ಯಸಭೆಯಲ್ಲಿ ಭಾರಿ ಗದ್ದಲಕ್ಕೆ ನಾಂದಿ ಹಾಡಿತು. ನೀರಜ್‌ ಶೇಖರ್ ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರ ಪುತ್ರ.

ಸಂಸದರಿಗೆ ಮನೆ ಖಾಲಿ ಮಾಡುವಂತೆ ಹೇಳುವ ಮೂಲಕ ಸರ್ಕಾರ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ­ ಎಂದು ಸಮಾಜ ವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್‌ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿ­ದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಸಂಸದರು ಸರ್ಕಾರದ ವಿರುದ್ಧ ಘೋಷಣೆ ಕೂಗಿ­ದರು. ಸಭಾಧ್ಯಕ್ಷರು ಮತ್ತು ಸಂಸ­ದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ   ಭರವಸೆ ನಂತರವೂ ಗದ್ದಲ ನಿಲ್ಲದ ಕಾರಣ ಕಲಾಪ ಮುಂದೂಡಲಾ­ಯಿತು.

ಸುಪ್ರೀಂಕೋರ್ಟ್‌ ನಿರ್ದೇಶನ ಹಾಗೂ ಸಂಪುಟ ಸಭೆಯ ನಿರ್ಧಾರದಂತೆ ನೀರಜ್‌ ಅವರಿಗೆ ಬಂಗ್ಲೆ ತೆರವುಗೊಳಿಸಲು ನೋಟಿಸ್‌ ನೀಡಲಾಗಿದೆ. ರಾಜ್ಯಸಭೆಯ ಸದಸ್ಯರಾದ ಅವರಿಗೆ ಚಿಕ್ಕ ನಿವಾಸ ನೀಡಲಾಗುತ್ತದೆ. ಸಚಿವರಿಗೆ ಮೀಸಲಾದ ದೊಡ್ಡ ನಿವಾಸದಲ್ಲಿ ವಾಸಿಸುವ ಹಕ್ಕು ಅವರಿಗಿಲ್ಲ ಎಂದು ನಗರಾಭಿ ವೃದ್ಧಿ ಸಚಿವ ವೆಂಕಯ್ಯ ನಾಯ್ಡು ಆನಂತರ ತಿಳಿಸಿದರು.

ಬಾಂಗ್ಲಾ ಜತೆ ಒಪ್ಪಂದ ಸಂಸದೀಯ ಸಮಿತಿ ಸಲಹೆ
ಬಾಂಗ್ಲಾ ದೇಶದೊಂದಿಗೆ ಗಡಿ ಒಪ್ಪಂದ ಮಾಡಿ ಕೊಳ್ಳುವ ಸಲುವಾಗಿ ಈ ಸಂಬಂಧದ ಮಸೂದೆ ಯನ್ನು ಕೂಡಲೇ ಮಂಡಿಸುವಂತೆ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನೇತೃತ್ವದ ವಿದೇಶಾಂಗ ವ್ಯವಹಾರ ಸ್ಥಾಯಿ ಸಮಿತಿ ಈ ಸಲಹೆ ನೀಡಿದ್ದು, ರಾಷ್ಟ್ರೀಯ ಹಿತಾಸಕ್ತಿ ಹಾಗೂ ನೆರೆಯ ದೇಶಗಳೊಂದಿಗೆ ಸಂಬಂಧ ಸುಧಾರಿಸುವ ದೃಷ್ಟಿ ಯಿಂದ ಈ ಒಪ್ಪಂದ ಮಹತ್ವದ್ದು ಎಂದು ಹೇಳಿದೆ.   ಸಂವಿಧಾನ ತಿದ್ದುಪಡಿ ಮಸೂದೆ 1974ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಬಾಂಗ್ಲಾ ಪ್ರಧಾನಿ ಮಜೀ ಬುರ್‌ ರೆಹಮಾನ್‌ ನಡುವಿನ  ಒಪ್ಪಂದವನ್ನು ಅನು ಮೋದಿಸುತ್ತದೆ. ಇದರಂತೆ ಗಡಿಯಲ್ಲಿ ಭೂ ಪ್ರದೇಶ, ಜನರನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.