ADVERTISEMENT

ಭೂಸ್ವಾಧೀನ: ಮತ್ತೆ ಸುಗ್ರೀವಾಜ್ಞೆಗೆ ಶಿಫಾರಸು

ಕೇಂದ್ರ ಸಂಪುಟ ನಿರ್ಧಾರ‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ನವದೆಹಲಿ: ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆಗೆ ಕಾರಣವಾಗಿರುವ ವಿವಾದಿತ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಪುನಃ ಹೊರಡಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲು ಕೇಂದ್ರ ಸಚಿವ ಸಂಪುಟ ಮಂಗಳವಾರ ಸಂಜೆ ತೀರ್ಮಾನಿಸಿತು.

ಹೊಸದಾಗಿ ಹೊರಡಿಸಲಾಗುವ ಭೂಸ್ವಾಧೀನ ಸುಗ್ರೀವಾಜ್ಞೆಯಲ್ಲಿ, ಲೋಕಸಭೆ ಕಳೆದ ತಿಂಗಳು ಅನುಮೋದನೆ ನೀಡಿರುವ ಒಂಬತ್ತು ತಿದ್ದುಪಡಿಗಳನ್ನು ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಂಪುಟ ಸಭೆ ನಿರ್ಧರಿಸಿತು.

ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಭೂಸ್ವಾಧೀನ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ. ಮಸೂದೆಗೆ ಅಧಿಕೃತವಾಗಿ ಒಂಬತ್ತು ತಿದ್ದುಪಡಿಗಳನ್ನು ಸೂಚಿಸಲಾಗಿದೆ. ಆದರೆ, ಏಪ್ರಿಲ್‌ ಐದರಂದು ಅನೂರ್ಜಿತಗೊಳ್ಳುವ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ಬಹುಮತವಿರುವ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಅಗತ್ಯ ಸಂಖ್ಯೆ ಸದಸ್ಯರಿಲ್ಲ.

ಕೇಂದ್ರ ಸಚಿವ ಸಂಪುಟದ ಶಿಫಾರಸು ರಾಷ್ಟ್ರಪತಿಗಳಿಗೆ ಹೋಗಲಿದ್ದು, ಏಪ್ರಿಲ್‌ ಐದರೊಳಗೆ ಮತ್ತೆ ಸುಗ್ರೀವಾಜ್ಞೆ ಹೊರಡಲಿದೆ. ಇದು ಹೊಸ ಸುಗ್ರೀವಾಜ್ಞೆಯಾಗಿದ್ದು ಕೆಳಮನೆ ಒಪ್ಪಿಗೆ ನೀಡಿರುವ ಒಂಬತ್ತು ತಿದ್ದುಪಡಿಗಳನ್ನು ಒಳಗೊಳ್ಳಲಿದೆ. ಸುಗ್ರೀವಾಜ್ಞೆಯು ಭೂಸ್ವಾಧೀನ ಮಸೂದೆಗಿಂತ ಭಿನ್ನವಾಗಿರುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಜತೆ ಸಹಕರಿಸಲು ಒಪ್ಪುತ್ತಿಲ್ಲ. ಅಲ್ಲದೆ, ಕೇಂದ್ರ ಜಾರಿಗೊಳಿಸಲು ಹೊರಟಿರುವ ಮಸೂದೆ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪ್ರಚಾರ ಮಾಡುತ್ತಿವೆ. ಯುಪಿಎ ಸರ್ಕಾರ ಜಾರಿಗೊಳಿಸಿರುವ ಭೂಸ್ವಾಧೀನ ಕಾಯ್ದೆಯನ್ನೇ ಒಪ್ಪಿಕೊಳ್ಳುವಂತೆ ಪಟ್ಟು ಹಿಡಿದಿವೆ.

ವಿರೋಧ ಪಕ್ಷಗಳ ವಿರೋಧವನ್ನು ಲೆಕ್ಕಿಸದೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ರಾಜ್ಯಸಭೆಯನ್ನು ಮುಂದೂಡಲು ಶುಕ್ರವಾರ ಶಿಫಾರಸು ಮಾಡಿತು. ಈ ಶಿಫಾರಸಿನ ಅನ್ವಯ ಶನಿವಾರ ರಾಷ್ಟ್ರಪತಿ ರಾಜ್ಯಸಭೆ ಕಲಾಪವನ್ನು ಮುಂದೂಡಿದರು.
ಫೆ.23ರಿಂದ ಆರಂಭವಾಗಿರುವ ಸಂಸತ್ತಿನ ಬಜೆಟ್‌ ಅಧಿವೇಶನಕ್ಕೆ ಏಪ್ರಿಲ್‌ 20ರವರೆಗೆ ಮಧ್ಯಂತರ ಬಿಡುವಿದೆ.

ಸಂವಿಧಾನದ ಅನ್ವಯ ಸುಗ್ರೀವಾಜ್ಞೆ ಹೊರಡಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಒಂದನ್ನು ಮುಂದೂಡುವುದು ಅನಿವಾರ್ಯ.
ಮೋದಿ ಸರ್ಕಾರ ಈಚೆಗೆ ಹೊರಡಿಸಿರುವ ಆರು ಸುಗ್ರೀವಾಜ್ಞೆಗಳಲ್ಲಿ ಭೂಸ್ವಾಧೀನ ಸುಗ್ರೀವಾಜ್ಞೆಯೂ ಸೇರಿದೆ. ಆದರೆ, ಐದಕ್ಕೆ ಸಂಸತ್ತು ಒಪ್ಪಿಗೆ ನೀಡಿದೆ.  ಪುನಃ ಹೊರಡಲಿರುವ ಈ ಸುಗ್ರೀವಾಜ್ಞೆ ಮೋದಿ ಸರ್ಕಾರದ ಹನ್ನೊಂದನೆ ಸುಗ್ರೀವಾಜ್ಞೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.