ADVERTISEMENT

ಭೂಸ್ವಾಧೀನ ಮಸೂದೆ ಜಂಟಿ ಸಮಿತಿಗೆ

​ಪ್ರಜಾವಾಣಿ ವಾರ್ತೆ
Published 12 ಮೇ 2015, 19:30 IST
Last Updated 12 ಮೇ 2015, 19:30 IST

ನವದೆಹಲಿ: ವಿರೋಧ ಪಕ್ಷಗಳು ಮತ್ತು ಆಡಳಿತ ಮೈತ್ರಿಕೂಟದ ಪಾಲುದಾರ ಪಕ್ಷಗಳ ಒತ್ತಡಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರವು ವಿವಾದಿತ ಭೂಸ್ವಾಧೀನ ಮಸೂದೆಯನ್ನು ಮಂಗಳವಾರ ಸಂಸತ್ತಿನ ಜಂಟಿ ಸದನ ಸಮಿತಿ ಪರಿಶೀಲನೆಗೆ ಒಪ್ಪಿಸಿತು.

ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಭೂಸ್ವಾಧೀನ ಮಸೂದೆ ವಿರುದ್ಧ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮಂಗಳವಾರ ಲೋಕಸಭೆಯಲ್ಲಿ ವಾಗ್ದಾಳಿ ಮುಂದುವರಿಸಿ, ‘ರೈತರ ಭೂಮಿ ಹಗಲು ದರೋಡೆ ಮಾಡಲು ಸರ್ಕಾರ ಪಿತೂರಿ ನಡೆಸುತ್ತಿದೆ’ ಎಂದರು.

ಎನ್‌ಡಿಎ ಸರ್ಕಾರದ ಮಿತ್ರ ಪಕ್ಷಗಳಾದ ಶಿವಸೇನಾ ಹಾಗೂ ಶಿರೋಮಣಿ ಅಕಾಲಿ ದಳ ವಿರೋಧ ಪಕ್ಷಗಳ ಜತೆ ಸೇರಿ ಉದ್ದೇಶಿತ ಭೂಸ್ವಾಧೀನ ಮಸೂದೆ ವಿರೋಧಿಸಿದ ಬಳಿಕ 30 ಸದಸ್ಯರ ಜಂಟಿ ಸದನ ಸಮಿತಿ ಪರಿಶೀಲನೆಗೆ ಒಪ್ಪಿಸಲಾಯಿತು. ಭೂಸ್ವಾಧೀನ ಮಸೂದೆ ಅಂಗೀಕಾರಕ್ಕೆ ಉತ್ಸುಕವಾಗಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಸೆಂಬರ್‌ ಬಳಿಕ ಎರಡು ಸಲ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸಿತ್ತು. ಅನಂತರ ಸುಗ್ರೀವಾಜ್ಞೆ ಬದಲಿಸಲು ಮಂಡಿಸಿದ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತ್ತು.

ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರನ್ನು ಒಳಗೊಂಡ ಸಮಿತಿ ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನ ವರದಿ ಸಲ್ಲಿಸಲಿದೆ. ಸಂಸತ್ತಿನ ಜಂಟಿ ಸದನ ಸಮಿತಿಗೆ ಲೋಕಸಭೆ ಸದಸ್ಯರ ಹೆಸರನ್ನು ಪ್ರಕಟಿಸಲಾಗಿದ್ದು, ರಾಜ್ಯಸಭೆ ಸದಸ್ಯರ ಹೆಸರನ್ನು ಸೂಚಿಸಬೇಕಿದೆ.

ಡಾ. ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ತಿದ್ದುಪಡಿಗೊಳಪಡಿಸುವ ಉದ್ದೇಶದ ಈ ಭೂಸ್ವಾಧೀನ ಮಸೂದೆಯು ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.