ADVERTISEMENT

ಭ್ರಷ್ಟರಿಗಿಲ್ಲ ಸಚಿವ ಸ್ಥಾನ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 8:53 IST
Last Updated 27 ಆಗಸ್ಟ್ 2014, 8:53 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರ ಆರೋಪ ಮತ್ತು ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಸಚಿವರನ್ನಾಗಿ ನೇಮಕ ಮಾಡಬಾರದು ಎಂದು ಸುಪ್ರೀಂ­ಕೋರ್ಟ್‌ ಬುಧವಾರ ಮಹತ್ವದ ಆದೇಶ ನೀಡಿದೆ.

ಭ್ರಷ್ಟಾಚಾರ ಮತ್ತು  ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಸಚಿವರನ್ನಾಗಿ ನೇಮಕ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುತ್ತದೆ.  ದೇಶದ ಪ್ರಧಾನಿ ಮತ್ತು  ರಾಜ್ಯಗಳ ಮುಖ್ಯಮಂತ್ರಿಗಳು ಇಂತಹ ಭ್ರಷ್ಟ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಹೆಸರನ್ನು ಸಚಿವ ಸ್ಥಾನಕ್ಕಾಗಿ ರಾಷ್ಟ್ರಪತಿಗೆ ಮತ್ತು ರಾಜ್ಯಪಾಲರಿಗೆ ಶಿಫಾರಸು ಮಾಡಬಾರದು ಎಂದು ಕೋರ್ಟ್‌ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಪಂಚ ಸದಸ್ಯ ಪೀಠ  ಈ ಮಹತ್ವದ ತೀರ್ಪು ನೀಡಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ  ಭ್ರಷ್ಟ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಹೆಸರನ್ನು ಸೇರಿಸಲೇಬಾರದು. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ತಮ್ಮ ವಿವೇಚನೆ ಬಳಿ ಸಮರ್ಥ ವ್ಯಕ್ತಿಗಳನ್ನು ಮಾತ್ರ ಸಚಿವ ಸ್ಥಾನಕ್ಕೆ ಶಿಫಾರಸು ಮಾಡ­ಬೇಕು. ಈ ವಿಚಾರದಲ್ಲಿ ಸಾಂವಿಧಾನಿಕ ಜವಾಬ್ದಾರಿ­ಯಿಂದ  ನಿರ್ಧಾರ ಕೈಗೊಂಡು ಹೆಸರನ್ನು ಅಂತಿಮ­ಗೊಳಿಸಬೇಕು ಎಂದು ಕೋರ್ಟ್‌ ಸೂಚಿಸಿದೆ.

ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಸಚಿವರನ್ನಾಗಿ ನೇಮಕ ಮಾಡಲಾಗುತ್ತಿದೆ ಎಂಬ ಆರೋಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿ­ಯೊಂದನ್ನು ಇತ್ಯರ್ಥ ಪಡಿಸಿದ ಸಂದರ್ಭದಲ್ಲಿ ಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.