ADVERTISEMENT

ಮಣಿಪುರ ಸಿ.ಎಂ ವಿರುದ್ಧ ಇರೋಮ್‌ ಶರ್ಮಿಳಾ ಸ್ಪರ್ಧೆ

ಪಿಟಿಐ
Published 20 ಮಾರ್ಚ್ 2017, 9:58 IST
Last Updated 20 ಮಾರ್ಚ್ 2017, 9:58 IST
ಮಣಿಪುರ ಸಿ.ಎಂ  ವಿರುದ್ಧ ಇರೋಮ್‌ ಶರ್ಮಿಳಾ ಸ್ಪರ್ಧೆ
ಮಣಿಪುರ ಸಿ.ಎಂ ವಿರುದ್ಧ ಇರೋಮ್‌ ಶರ್ಮಿಳಾ ಸ್ಪರ್ಧೆ   
ಇಂಫಾಲ: ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರದ ಮುಖ್ಯಮಂತ್ರಿ ಒಕ್ರಮ್‌ ಇಬೋಬಿ ಸಿಂಗ್‌ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಇರೋಮ್‌ ಶರ್ಮಿಳಾ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
 
ತೌಬಾಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಇಬೋಬಿ ವಿರುದ್ಧ ಶರ್ಮಿಳಾ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಸಂಚಾಲಕ ಎರೆಂಡ್ರೊ ಲೈಚೊನ್‌ಬಮ್‌ ತಿಳಿಸಿದ್ದಾರೆ.
 
ಕಳೆದ ಮೂರು ಅವಧಿಗೆ ಮಣಿಪುರದ ಮುಖ್ಯಮಂತ್ರಿಯಾಗಿರುವ ಇಬೋಬಿ ವಿರುದ್ಧ ರಾಜಕೀಯದಲ್ಲಿ ಅನನುಭವಿಯಾಗಿರುವ ಶರ್ಮಿಳಾ ಸ್ಪರ್ಧಿಸಲಿರುವುದು ವಿಶೇಷ.
 
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದ ಶರ್ಮಿಳಾ ಕಳೆದ ಆಗಸ್ಟ್‌ನಲ್ಲಿ, ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಅಕ್ಟೋಬರ್‌ ತಿಂಗಳಲ್ಲಿ ಪೀಪಲ್ಸ್‌ ರೀಸರ್ಜೆನ್ಸ್‌ ಆ್ಯಂಡ್‌ ಜಸ್ಟೀಸ್‌ ಅಲಯನ್ಸ್‌(ಪಿಆರ್‌ಜೆಎ) ಪಕ್ಷ ಸ್ಥಾಪಿಸಿ, ತೌಬಾಲ್‌ ಹಾಗೂ ಕುರೈನಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. 
 
ಆದರೆ ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಶರ್ಮಿಳಾ ಅವರ ಪರ ತೌಬಾಲ್‌ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಪಕ್ಷದ ಚಿಹ್ನೆಯಾಗಿ ‘ಸೀಟಿ’ಯನ್ನು ಚುನಾವಣಾ ಆಯೋಗ ನೀಡಿದ್ದು, ಪಕ್ಷದಿಂದ 10 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಲೈಚೊನ್‌ಬಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.