ADVERTISEMENT

ಮತಾಂತರ: ಖರ್ಗೆ ಚಾಟಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:42 IST
Last Updated 22 ಡಿಸೆಂಬರ್ 2014, 19:42 IST

ನವದೆಹಲಿ (ಪಿಟಿಐ): ‘ದೇಶದಲ್ಲಿರು­ವುದು ಮೋದಿ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ವಲ್ಲ. ಈ ಸರ್ಕಾರದಲ್ಲಿ ಮೋದಿ ಅವರ  ಮಾತುಗಳಿಗೆ ಮಾತ್ರ ಬೆಲೆ ಇದೆ.   ಸರ್ಕಾರದ ಬೀಗ ಇರುವುದೇ ಅವರ ಕೈಯಲ್ಲಿ. ಹೀಗಿರುವಾಗ ಮತಾಂತರ ಕುರಿತು ಖುದ್ದು ಪ್ರಧಾನಿ ಹೇಳಿಕೆ ನೀಡಲಿ ಎಂದು  ಬಯಸುವುದರಲ್ಲಿ ತಪ್ಪೇನಿದೆ?’ – ಹೀಗಂತ  ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯಭರಿತ ಮಾತುಗಳಲ್ಲಿ ಆಡಳಿತ ಪಕ್ಷವನ್ನು ಕುಟುಕಿದರು.

ಇದರಿಂದ ಕೆರಳಿದ   ಸಂಸದೀಯ ವ್ಯವ­ಹಾರ­ಗಳ ಸಚಿವ ವೆಂಕಯ್ಯ ನಾಯ್ಡು  ‘ಹಾಗಾದರೆ ನಾವ್ಯಾರು? ನಾವೂ ಸಚಿವರು. ಮೋದಿ  ನಮ್ಮ ತಂಡದ ನಾಯಕ. ಅವರು ನಮ್ಮೆಲ್ಲರ  ಮಾತು­ಗಳನ್ನೂ ಆಲಿಸುತ್ತಾರೆ. ನಮ್ಮಲ್ಲಿ ಸಾಮೂ­ಹಿಕ ನಾಯಕತ್ವ ಇದೆ.  ನಾವೆಲ್ಲರೂ ಸಮಾನರು...’ ಎಂದು ಕೋಪದಿಂದಲೇ ಉತ್ತರಿಸಿದರು. ‘ನಾಯ್ಡು ಅವರ ಕುರ್ಚಿಯಲ್ಲಿ ಸ್ಪ್ರಿಂಗ್‌ ಇದೇ ಏನೋ ಎಂಬಂತೆ ಅವರು  ಆಗಾಗ ಎದ್ದು ನಿಂತು ಮಾತನಾಡುತ್ತಿ­ರುತ್ತಾರೆ’ ಎಂದು ಪುನಃ ಖರ್ಗೆ  ಕೆಣಕಿದರು.

‘ನಮ್ಮ ಸರ್ಕಾರ ಕ್ರಿಯಾಶೀಲವಾಗಿದೆ. ಅದರಿಂದಾಗಿಯೇ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೂ ನಾನು ಉತ್ತರಿಸುತ್ತಿದ್ದೇನೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ನನಗಿಲ್ಲ’ ಎಂದು  ನಾಯ್ಡು ತಿರುಗೇಟು ನೀಡಿದರು. ಮತಾಂತರ ಕುರಿತು ಪ್ರಧಾನಿ ಹೇಳಿಕೆಗೆ ಸಂಬಂಧಿಸಿಂತೆ ಖರ್ಗೆ ಹಾಗೂ ನಾಯ್ಡು ನಡುವೆ ಆರಂಭ­ವಾದ ಜುಗಲ್‌ಬಂದಿ  ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

‘ಆರ್‌ಎಸ್‌ಎಸ್‌ ಬಗ್ಗೆ ಹೆಮ್ಮೆ ಎಂದು ಹೇಳುತ್ತೀರಿ. ಅದೇ ಆರ್‌ಎಸ್‌ಎಸ್‌ ಮತಾಂತರದಲ್ಲಿ ತೊಡಗಿದೆಯಲ್ಲ’ ಎಂದು ಖರ್ಗೆ ಮರು ಪ್ರಶ್ನೆ ಹಾಕಿದರು. ‘ನೀವು ಗಾಂಧಿ ಕುಟುಂಬದ ಬಗ್ಗೆ ಹೆಮ್ಮ  ಪಡುತ್ತೀರಿ. ನಾನು ಆರ್‌ಎಸ್‌ಎಸ್‌ ಬಗ್ಗೆ ಹೆಮ್ಮೆ ಪಡುತ್ತೇನೆ’ ಎಂದು ನಾಯ್ಡು ಮಾರುತ್ತರ ನೀಡಿದರು.

ಇದೇ ಸಂದರ್ಭದಲ್ಲಿ ‘ಪ್ರಧಾನಿ ಭಾಗ್‌ ಗಯಾ...‘ (ಪ್ರಧಾನಿ ಓಡಿ ಹೋಗಿದ್ದಾರೆ...) ಎಂಬ ವಿರೋಧ ಪಕ್ಷಗಳ ಘೋಷಣೆಗಳು ನಾಯ್ಡು ಅವರನ್ನು ಮತ್ತಷ್ಟು ಕೆರಳಿಸಿದವು. ‘ಛೇ! ಇವೆಂತಾ ಘೋಷಣೆಗಳು? ಮುಂದೊಂದು ದಿನ ಇವು ನಿಮಗೆ  ತಿರುಮಂತ್ರವಾಗುತ್ತವೆ ನೋಡುತ್ತಿರಿ...’ ಎಂದು ವಿರೋಧ ಪಕ್ಷಗಳ ಸದಸ್ಯರ ಮೇಲೆ ಸಿಟ್ಟಿನಿಂದ ಹರಿಹಾಯ್ದರು.

‘ಮತಾಂತರಕ್ಕೆ ಬೆಂಬಲ ಇಲ್ಲ’: ಕಳೆದ ಒಂದು ವಾರದಿಂದ ರಾಜ್ಯಸಭೆ­ಯ ಕಲಾಪಗಳನ್ನು ನುಂಗಿದ್ದ ಮತಾಂ­ತರ ವಿವಾದ ಲೋಕ­ಸಭೆಗೆ ಕಾಲಿಟ್ಟಿದ್ದು, ಇಲ್ಲಿಯೂ ಕೋಲಾಹಲ ಸೃಷ್ಟಿಸಿದೆ. ಪ್ರಧಾನಿ  ಹೇಳಿಕೆ ಪಟ್ಟು ಹಿಡಿದಿದ್ದ ವಿರೋಧ ಪಕ್ಷಗಳ  ಬೇಡಿಕೆಗೆ ಮಣಿ­ಯದ ಸರ್ಕಾರ ‘ಈ ವಿವಾದಕ್ಕೂ  ತನಗೂ ಸಂಬಂಧವಿಲ್ಲ’ ಎಂದು ಹೇಳಿ ಕೈ ತೊಳೆದುಕೊಂಡಿದೆ.

‘ಮತಾಂತರ ಅಥವಾ ಮರು ಮತಾಂತರದಲ್ಲಿ ಕೇಂದ್ರ ಸರ್ಕಾರ  ಅಥವಾ ಬಿಜೆಪಿಯ ಪಾತ್ರವಿಲ್ಲ.  ಸರ್ಕಾರ ಮತಾಂತರ­ವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಮತಾಂತರಕ್ಕೆ ಸಂಬಂಧಿ­ಸಿದಂತೆ ಯಾರಾದರೂ ಕಾನೂನು ಉಲ್ಲಂಘಿ­ಸಿದರೆ ಅಂಥವರ ವಿರುದ್ಧ  ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳ­ಬಹುದು. ಆದರೆ, ವಿರೋಧ ಪಕ್ಷಗಳು ಮತಾಂತರ ವಿವಾದ­ದಿಂದ ಮತಗಳಿಸಲು ಯತ್ನಿಸುತ್ತಿವೆ’ ಎಂದು ಸಚಿವ ವೆಂಕಯ್ಯ ನಾಯ್ಡು ಲೋಕಸಭೆಗೆ ತಿಳಿಸಿದರು.

‘ದೇಶದ ಒಂದಲ್ಲ, ಒಂದು ರಾಜ್ಯದಲ್ಲಿ  ಪ್ರತಿನಿತ್ಯ ‘ಘರ್‌ ವಾಪಸಿ’ ಹೆಸರಿನಲ್ಲಿ ಮರು ಮತಾಂತರ ನಡೆಯುತ್ತಿವೆ. ಇದಕ್ಕೆ ಸರ್ಕಾರದ ಬೆಂಬಲವೂ ಇದೆ’ ಎಂದು ಖರ್ಗೆ ಆರೋಪಿಸಿದರು. ‘ಕೇರಳದಲ್ಲಿ ನಿಮ್ಮದೇ ಕಾಂಗ್ರೆಸ್‌ ಸರ್ಕಾರವೇ ಇದೆಯಲ್ಲ. ಅಲ್ಲಿ ಮತಾಂತರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದಂತೆ ನಿಮ್ಮನ್ನು ತಡೆದವರು ಯಾರು’ ಎಂದು ಸಚಿವರು ಪ್ರಶ್ನಿಸಿದರು.  ಈ ಉತ್ತರದಿಂದ ಸಮಾಧಾನ­ಗೊಳ್ಳದ ಕಾಂಗ್ರೆಸ್‌, ಟಿಎಂಸಿ, ಜೆಡಿಯು, ಆರ್‌ಜೆಡಿ, ಜೆಡಿಎಸ್‌ ಹಾಗೂ ಎಡ ಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು.

56 ಇಂಚಿನ ಎದೆ ಬೇಕಿಲ್ಲ
ಸದನಕ್ಕೆ ಬಂದು ಹೇಳಿಕೆ ನೀಡಲು ಪ್ರಧಾನಿಗೆ 56 ಇಂಚಿನ ಎದೆ ಬೇಕಾಗಿಲ್ಲ. ನಾಲ್ಕು ಇಂಚಿನ ಹೃದಯ ಸಾಕು
– ಡೆರೆಕ್‌ ಓ’ಬ್ರಿಯೆನ್‌,   ಟಿಎಂಸಿಯ ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.