ADVERTISEMENT

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 9:12 IST
Last Updated 23 ಅಕ್ಟೋಬರ್ 2014, 9:12 IST

ಜಮ್ಮು (ಪಿಟಿಐ): ದೇಶದೆಲ್ಲಡೆ ಪಟಾಕಿಗಳ ಸದ್ದು... ಆದರೆ ಗಡಿಯಲ್ಲಿ  ಮಾತ್ರ ಗುಂಡಿನ ಮೊರೆತ. ಜಮ್ಮು ಮತ್ತು ಕಾಶ್ಮೀರದ ಜಮ್ಮು ಹಾಗೂ ಸಾಂಬಾ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಗಡಿಯ ಹೊರ ಚೌಕಿಗಳ ಮೇಲೆ ಪಾಕಿಸ್ತಾನ ಗುರುವಾರ ಮತ್ತೆರಡು ಬಾರಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ.

‘ರಾಮಗಡ ಹಾಗೂ ಅರ್ನಿಯಾ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿರುವ ಗಡಿ ಹೊರ ಚೌಕಿಗಳ ಮೇಲೆ ಪಾಕಿಸ್ತಾನ ಯೋಧರು ನಸುಕಿನ 1 ಗಂಟೆ ಹಾಗೂ 4 ಗಂಟೆಯ ವೇಳೆಗೆ ಚಿಕ್ಕಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದ್ದಾರೆ’ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ವಕ್ತಾರೊಬ್ಬರು ಇಲ್ಲಿ ತಿಳಿಸಿದ್ದಾರೆ.

ಅಲ್ಲದೇ, ‘ಘಟನೆಯಲ್ಲಿ ಯಾವುದೇ ಸಾವು ಅಥವಾ ಯಾರಿಗೂ ಗಾಯಗಳಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ರಾಮಗಡ ಸಾಂಬಾ ಜಿಲ್ಲೆಯಲ್ಲಿದ್ದರೆ ಅರ್ನಿಯಾ ಜಮ್ಮು ಜಿಲ್ಲೆಗೆ ಸೇರಿದೆ. ಬುಧವಾರದಿಂದ ಪಾಕ್‌ ಕಡೆಯಿಂದ ನಡೆದ ಮೂರನೇ ಕದನ ವಿರಾಮ ಇದಾಗಿದೆ.

ಈ ತಿಂಗಳ ಆರಂಭದಿಂದ ಪಾಕ್ ಕಡೆಯಿಂದ ನಡೆದಿರುವ ಕದನ ವಿರಾಮ ಉಲ್ಲಂಘನೆ ಘಟನೆಯಲ್ಲಿ ಭದ್ರತಾ ಪಡೆಯ 13 ಸಿಬ್ಬಂದಿ ಸೇರಿದಂತೆ 95 ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.