ADVERTISEMENT

'ಮಧುಚಂದ್ರ' ಹೇಳಿಕೆ: ರಾಮದೇವ್ ವಿರುದ್ಧದ ಖಟ್ಲೆಗಳಿಗೆ ಸುಪ್ರಿಂ ತಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2014, 9:21 IST
Last Updated 9 ಮೇ 2014, 9:21 IST

ನವದೆಹಲಿ (ಪಿಟಿಐ):  ರಾಹುಲ್ ಗಾಂಧಿ ಅವರು ದಲಿತರ ಮನೆಗಳಿಗೆ ಭೇಟಿ ನೀಡುವುದನ್ನು ಗುರಿಯಾಗಿಟ್ಟುಕೊಂಡು ನೀಡಲಾದ ವಿವಾದಾತ್ಮಕ 'ಮಧುಚಂದ್ರ' ಹೇಳಿಕೆಗೆ ಸಂಬಂಧಿಸಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಯೋಗ ಗುರು ಬಾಬಾ ರಾಮ ದೇವ್ ಅವರ ವಿರುದ್ಧ ದಾಖಲಿಸಲಾಗಿದ್ದ ಎಲ್ಲಾ ಖಟ್ಲೆಗಳ ವಿಚಾರಣೆಗಳಿಗೂ ಸುಪ್ರಿಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿತು.

ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧಾ ಅವರ ಪೀಠವು ರಾಮದೇವ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ ಎಲ್ಲಾ ರಾಜ್ಯಗಳ ಪೊಲೀಸರಿಗೂ ನೋಟಿಸ್ ಜಾರಿ ಮಾಡಿತು.

'ಪ್ರಕರಣದ ನ್ಯಾಯಾನ್ಯಾಯದ ಬಗ್ಗೆ ನಾವು ಯಾವುದೇ ಅಭಿಪ್ರಾಯ ನೀಡುತ್ತಿಲ್ಲ ಎಂಬುದಾಗಿ ಈ ಮೂಲಕ ಸ್ಪಷ್ಟ ಪಡಿಸಲಾಗಿದೆ' ಎಂದೂ ಪೀಠ ಹೇಳಿತು.

ತಮ್ಮ ವಿವಾದಾತ್ಮಕ 'ಮಧು ಚಂದ್ರ' ಹೇಳಿಕೆ ವಿರುದ್ಧ ರಾಷ್ಟ್ರದ ವಿವಿಧ ಭಾಗಗಳಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನೂ ಒಂದೇ ಖಟ್ಲೆಯಲ್ಲಿ ಸೇರಿಸಬೇಕು ಮತ್ತು ತಮ್ಮ ವಿರುದ್ಧದ ನಿರ್ಬಂಧ / ದಬ್ಬಾಳಿಕೆಯ ಕ್ರಮಗಳನ್ನು ತಡೆಹಿಡಿಯುವಂತೆ ನಿರ್ದೇಶನ ಕೋರಿ ರಾಮದೇವ್ ಅವರು ಸಲ್ಲಿಸಿದ್ದ ಅರ್ಜಿಯ ಸಂಬಂಧ ಸುಪ್ರಿಂಕೋರ್ಟ್ ಈ ಆದೇಶ ನೀಡಿತು.

ವಿವಾದಾತ್ಮಕ 'ಮಧುಚಂದ್ರ' ಹೇಳಿಕೆ ಹಿನ್ನೆಲೆಯಲ್ಲಿ ದಾಖಲಿಸಲಾದ ಎಲ್ಲಾ ಎಫ್ ಐ ಆರ್ ಗಳನ್ನೂ ಒಟ್ಟುಗೂಡಿಸಿ ಲಖನೌ ನ್ಯಾಯಾಲಯದಲ್ಲಿ ಅಥವಾ ಸುಪ್ರೀಂಕೋರ್ಟಿನ ಆಯ್ಕೆಯ ಜಾಗದಲ್ಲಿ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ವಕೀಲ ಕೇಶವ ಮೋಹನ್ ಇದಕ್ಕೆ ಮುನ್ನ  ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.