ADVERTISEMENT

ಮಹಾರಾಷ್ಟ್ರ ಸಿ.ಎಂ ಸ್ಥಾನಕ್ಕೆ ಫಡ್ನವೀಸ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರ ಬಿಜೆಪಿ ಶಾಸ­ಕಾಂಗ ಪಕ್ಷದ ನಾಯಕ­ನಾಗಿ ದೇವೇಂದ್ರ ಫಡ್ನವೀಸ್‌ ಮಂಗಳ­ವಾರ ಅವಿರೋಧ­ವಾಗಿ ಆಯ್ಕೆ­ಯಾಗಿದ್ದಾರೆ. ಈ ಮೂಲಕ ಹಲವು ದಿನಗಳ ಅನಿಶ್ಚಿತತೆ ಕೊನೆ­ಗೊಂಡಿದೆ.

ನಂತರ ಫಡ್ನವೀಸ್‌ ಅವರು ರಾಜ್ಯಪಾಲ ಸಿ. ವಿದ್ಯಾಶಂಕರ ರಾವ್‌ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ‘ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡುವಂತೆ ಕೋರಿ ಪತ್ರ ನೀಡಲಾ­ಗಿದೆ. ಇದೇ 31ರಂದು ಪ್ರಮಾಣ­ವಚನ ಸ್ವೀಕರಿಸಿದ 15 ದಿನಗಳೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ’ ಎಂದು ನಂತರ ಫಡ್ನವೀಸ್‌ ಹೇಳಿದರು,

ಮಂಗಳವಾರ ನಡೆದ ಶಾಸಕಾಂಗ ಸಭೆಯಲ್ಲಿ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷರಾಗಿದ್ದ ಫಡ್ನವೀಸ್‌ ಹೆಸರನ್ನು ನಿರ್ಗಮಿತ ವಿಧಾನಸಭೆಯ ವಿರೋಧ­ಪಕ್ಷದ ನಾಯಕ ಏಕನಾಥ್‌ ಖಾಡ್ಸೆ ಮತ್ತು ಪರಿಷತ್ತಿನ ವಿರೋಧಪಕ್ಷದ ನಾಯಕ ವಿನೋದ್‌ ತಾವ್ಡೆ, ಸುಧೀರ್‌ ಮುಂಗಂಟಿವಾರ್‌ ಹಾಗೂ ಪಂಕಜ್‌ ಮುಂಡೆ ಸೂಚಿಸಿದರು.

ಶಾಸಕಾಂಗ ಪಕ್ಷದ ನಾಯಕನಾಗಿ ಫಡ್ನ­ವೀಸ್‌ ಅವರನ್ನು ಸೂಚಿ­ಸಿದ ನಿರ್ಣ­ಯಕ್ಕೆ ನೂತನ  ಶಾಸಕರು ಅವಿರೋಧ ವಾಗಿ ಸಮ್ಮತಿ ಸೂಚಿಸಿದರು. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಮಹಾರಾಷ್ಟ್ರ ಬಿಜೆಪಿ ಉಸ್ತು ವಾರಿ ಪ್ರಧಾನ ಕಾರ್ಯದರ್ಶಿ ಜೆ.ಪಿ.­ನಡ್ಡಾ ಆಯ್ಕೆ ಪ್ರಕ್ರಿಯೆಗಾಗಿ ಕೇಂದ್ರದ ವೀಕ್ಷಕರಾಗಿ ಭಾಗವಹಿಸಿದ್ದರು.

ಚುನಾವಣೆಯ ಫಲಿತಾಂಶ ಪ್ರಕಟ­ವಾಗಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ  ಬೆಂಬಲವಿದ್ದ ಫಡ್ನವೀಸ್‌ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು.
ಮೂವರ ನಡುವೆ ಪೈಪೋಟಿ: ಫಡ್ನವೀಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದರೂ ಈ ಸ್ಥಾನಕ್ಕೆ ತಮ್ಮದೇ ಅಭ್ಯರ್ಥಿ ಆಯ್ಕೆ­ಯಾಗಬೇಕು ಎಂದು ಮೂವರು ಮುಖಂಡರು ಲಾಬಿ ನಡೆಸಿದ್ದರು.

ಉತ್ತರ ಮಹಾರಾಷ್ಟ್ರದಲ್ಲಿ ಪ್ರಭಾವಿ ನಾಯಕರಾಗಿರುವ ಖಾಡ್ಸೆ ತಮ್ಮದೇ ಪ್ರದೇಶದ ನಾಯಕರೊಬ್ಬರು ಮುಖ್ಯ­ಮಂತ್ರಿ­ಯಾಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಇನ್ನೊಂದೆಡೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೇ ಮುಖ್ಯ­ಮಂತ್ರಿ­ಯಾ­ಗಬೇಕು ಎಂದು ಮುಂಗಂಟಿ­ವಾರ್‌ ಒಲವು ತೋರಿದ್ದರು. ಇತ್ತೀಚೆಗೆ ನಿಧನ­ರಾದ ಕೇಂದ್ರ ಸಚಿವ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜ್‌ ಮುಂಡೆ ಅವರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು.

ನಾಗಪುರದ ಉಡುಗೊರೆ: ‘ಫಡ್ನವೀಸ್‌, ದೇಶಕ್ಕೆ ನಾಗಪುರದ ಉಡು­ಗೊರೆ’ ಎಂದು ಚುನಾವಣಾ ರ್‍್ಯಾಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದರು. ಲೋಕಸಭಾ ಚುನಾವಣೆ­ಯಲ್ಲಿ ವಹಿಸಿದ ಪಾತ್ರಕ್ಕೆ ಫಡ್ನವೀಸ್, ಅಮಿತ್ ಷಾ ಅವರಿಂದಲೂ ಪ್ರಶಂಸೆಗೆ ಒಳಗಾ­ಗಿದ್ದರು.

ಸಣ್ಣ ಸಂಪುಟದ ಜತೆ ಪ್ರಮಾಣ:  ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಜತೆ ಶಿವಸೇನಾ ಸೇರುವ ಬಗ್ಗೆ ಇನ್ನೂ ಖಚಿತವಾದ ನಿಲುವು ವ್ಯಕ್ತವಾಗ ದಿದ್ದರೂ ಫಡ್ನವೀಸ್‌ ಸಣ್ಣ ಸಂಪುಟ­ದೊಂದಿಗೆ ಪ್ರಮಾಣವಚನ ಸ್ವೀಕರಿ­ಸಲಿದ್ದಾರೆ.

ನೂತನ ಶಾಸಕ ಗೋವಿಂದ್ ಎಂ.ರಾಥೋಡ್‌ ಅವರ ನಿಧನದಿಂದ ವಿಧಾನಸಭೆ­ಯಲ್ಲಿ ಬಿಜೆಪಿಯ ಬಲ 122ರಿಂದ 121ಕ್ಕೆ ಕುಸಿದಿದೆ. ಆದರೆ ಈಗಾ­ಗಲೇ ಬಿಜೆಪಿ ಸಣ್ಣ ಪಕ್ಷಗಳ ಬೆಂಬಲ ಕೋರಿದೆ. ಚುನಾವಣಾ ಪೂರ್ವದಲ್ಲೇ ರಾಷ್ಟ್ರೀಯ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದು. ಆ ಪಕ್ಷದ ಒಬ್ಬರು ಶಾಸಕರಿದ್ದಾರೆ.

ಶಿವಸೇನಾ ಆಸಕ್ತಿ: ಶಿವಸೇನಾ, ಸರ್ಕಾರ ಸೇರುವ ಮಾತುಕತೆ ಇನ್ನೂ ಮುಂದುವರಿದಿದೆ. ಸಂಪುಟ ವಿಸ್ತರಣೆ­ಯಾದಾಗ ಸರ್ಕಾರ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌, ಬಿಜೆಪಿಗೆ ಹತ್ತಿರವಾಗಿದ್ದೇವೆ ಎಂಬ ಮಾತನ್ನು ಮಂಗಳವಾರವೂ ಆಡಿದ್ದಾರೆ. ‘ಬಿಜೆಪಿ ಮತ್ತು ಶಿವಸೇನಾದ ರಕ್ತದ ಗುಂಪುಗಳು ಒಂದೇ. ಸರ್ಕಾರ ಸೇರಲು ನಾವು ಯಾವುದೇ ಪೂರ್ವ ಷರತ್ತುಗಳನ್ನು ಹಾಕಿಲ್ಲ’ ಎಂದು ಅವರು ಹೇಳಿದ್ದಾರೆ.  ಮೈತ್ರಿ ಸರ್ಕಾರಕ್ಕೆ ಬೇಷರತ್‌ ಸೇರುವಂತೆ ಶಿವಸೇನಾಕ್ಕೆ ಬಿಜೆಪಿ  ನಾಯ­ಕರೂ ಒತ್ತಾಯಿಸುತ್ತಿದ್ದಾರೆ. ಉಪ­ಮುಖ್ಯಮಂತ್ರಿ ಮತ್ತು ಪ್ರಮುಖ ಖಾತೆಗಳಿಗೆ ಸೇನಾ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT