ADVERTISEMENT

ಮಹಿಳಾ ಕರ್ನಲ್‌ಗೆ ಬ್ಲ್ಯಾಕ್‌ಮೇಲ್‌: ಐಎಸ್‌ಐ ನಂಟು ಹೊಂದಿರುವ ಶಂಕಿತನ ಸೆರೆ

ಪಿಟಿಐ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ನವದೆಹಲಿ: ಮಹಿಳಾ ಕರ್ನಲ್‌ ಒಬ್ಬರ ಮಾರ್ಪಡಿಸಿದ ಚಿತ್ರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ  ಮೊಹಮ್ಮದ್‌ ಪರ್ವೇಜ್‌ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ಜತೆ ಈತ ನಂಟು ಹೊಂದಿದ್ದಾನೆ ಎಂದು ಶಂಕಿಸಲಾಗಿದೆ.

ಇದೇ 13ರಂದು ಈತನನ್ನು ಪೊಲೀಸರು ಬಂಧಿಸಿದ್ದರು. ಈತ ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಎಂಬುದು ತಿಳಿದ ಬಳಿಕ ತನಿಖೆಯನ್ನು ವಿಶೇಷ ಘಟಕಕ್ಕೆ ವಹಿಸಲಾಗಿದೆ.

ಎರಡು ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ತಮಗೆ ಮಾರ್ಪಡಿಸಿದ ಮತ್ತು ಅಶ್ಲೀಲ ಚಿತ್ರಗಳು ಬರುತ್ತಿವೆ ಎಂದು ಮಹಿಳಾ ಕರ್ನಲ್‌ ಒಬ್ಬರು ದ್ವಾರಕಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಚಿತ್ರಗಳನ್ನು ಕಳುಹಿಸಿದ ವ್ಯಕ್ತಿಯ ಜತೆ ಮಾತನಾಡದಿದ್ದರೆ ಚಿತ್ರಗಳನ್ನು ಅಂತರ್ಜಾಲದ ಮೂಲಕ ಪ್ರಸಾರ ಮಾಡಲಾಗುವುದು ಎಂದು ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದು ಕರ್ನಲ್‌ ಆರೋಪಿಸಿದ್ದಾರೆ.

ADVERTISEMENT

ಅಶ್ಲೀಲ ಸಂದೇಶ ಮತ್ತು ಚಿತ್ರಗಳನ್ನು ಕಳುಹಿಸುತ್ತಿದ್ದ ಎರಡೂ ಸಂಖ್ಯೆಗಳನ್ನು ಕರ್ನಲ್‌ ಅವರು ತಡೆದ (ಬ್ಲಾಕ್‌) ಬಳಿಕ ಮಹಿಳೆಯೊಬ್ಬರ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಸಂದೇಶಗಳು ಬರಲಾರಂಭಿಸಿದವು ಎಂದು ಕರ್ನಲ್‌ ದೂರಿನಲ್ಲಿ ಹೇಳಿದ್ದಾರೆ. 

ಫೇಸ್‌ಬುಕ್‌ ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿಯ ಆಧಾರದಲ್ಲಿ ಪರ್ವೇಜ್‌ನನ್ನು ಬಂಧಿಸಲಾಯಿತು. ಈತ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಮತ್ತು ಪಾಕಿಸ್ತಾನದ ಕೆಲವರಿಗೆ ಸಿಮ್‌ ಕಾರ್ಡ್‌ಗಳನ್ನು ಒದಗಿಸಿದ್ದು ತನಿಖೆ ವೇಳೆ ತಿಳಿದು ಬಂತು. ಹಿಂದೆಯೂ ಈತ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಲ್‌ ಅವರಿಂದ ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳುವುದು ಪರ್ವೇಜ್‌ನ ಉದ್ದೇಶ ಆಗಿರಬಹುದು ಎಂದು ಶಂಕಿಸಲಾಗಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.