ADVERTISEMENT

ಮಾಂಝಿ: ಬಿಹಾರ ಸಿ.ಎಂ

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST

ಪಟ್ನಾ (ಪಿಟಿಐ):  ಜೆಡಿಯು ಪಕ್ಷದ ಹಿರಿಯ ದಲಿತ ಮುಖಂಡ ಜೀತನ ರಾಂ ಮಾಂಝಿ ಅವರು ಬಿಹಾರದ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ ನಿತೀಶ್ ಕುಮಾರ್‌ ಅವರು ಮಾಂಝಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ­ಯಾಗಿ ಮುಂದು­ವರಿಯಬೇಕು ಎಂಬ ಶಾಸಕರ ಮನವಿಗೆ ಮಣಿಯದ ನಿತೀಶ್‌ ಕುಮಾರ್‌, ರಾಜೀನಾಮೆ ವಾಪಸ್‌ ಪಡೆಯಲು ನಿರಾಕರಿಸಿದ್ದರು.

‘ಜೀತನ  ರಾಂ ಮಾಂಝಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸುವ ಪ್ರಸ್ತಾವವನ್ನು ನಾವು ರಾಜ್ಯಪಾಲ ಡಿ.ವೈ. ಪಾಟೀಲ್‌ ಅವರ ಮುಂದೆ ಇಟ್ಟಿದ್ದೇವೆ’ ಎಂದು ನಿತೀಶ್‌ ಕುಮಾರ್‌ ರಾಜಭವನದ ಹೊರಗಡೆ ಸುದ್ದಿಗಾರರಿಗೆ ತಿಳಿಸಿದರು.

‘ಹೊಸ ಸರ್ಕಾರ ರಚನೆಗಾಗಿ  ಜೆಡಿಯುದ 117, ಇಬ್ಬರು ಪಕ್ಷೇತರರು ಹಾಗೂ ಒಬ್ಬ ಸಿಪಿಐ ಸದಸ್ಯ ಸೇರಿದಂತೆ 120 ಬೆಂಬಲಿಗ ಶಾಸಕರ ಹೆಸರು­ಗಳುಳ್ಳ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿ­ದ್ದೇವೆ’ ಎಂದೂ ಅವರು ಹೇಳಿದರು.

‘68 ವರ್ಷದ ಮಾಂಝಿ ಅವರ ಹೆಸರನ್ನು ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಮತ್ತು ಪಕ್ಷದ ರಾಜ್ಯಾಧ್ಯಕ್ಷ  ವಸಿಷ್ಠ ನಾರಾಯಣ್‌ ಸಿಂಗ್‌ ಅಂಗೀ­ಕರಿಸಿದ್ದಾರೆ’ ಎಂದು ನಿತೀಶ್‌ ತಿಳಿಸಿದರು. ನಿತೀಶ್‌ ಸಂಪುಟದಲ್ಲಿ ಮಾಂಝಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾಗಿದ್ದರು.

ಮಾಂಝಿ ಅವರನ್ನು ಆಯ್ಕೆ ಮಾಡಲು ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಿತೀಶ್‌, ‘ಅವರು ಅನುಭವಿ ಮುಖಂಡ. ಪಕ್ಷಕ್ಕೆ ಅವರು ನೀಡಿರುವ ಕೊಡುಗೆ ಅಗಾಧ-­ವಾದದ್ದು’ ಎಂದು ಹೇಳಿದರು.

‘ರಾಜೀ­ನಾಮೆ ವಾಪಸ್‌ಗೆ ನಿತೀಶ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ನಿರ್ಧಾರವನ್ನು ಎಲ್ಲಾ ಶಾಸಕರು ಅಂಗೀ-­ಕರಿಸಿದರು. ಜತೆಗೆ ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುವ ಹೊಣೆ­ಯನ್ನು ಅವರಿಗೇ ವಹಿಸಿದರು’ ಎಂದು ಜೆಡಿಯು ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ್‌ ಸಿಂಗ್‌ ಅವರು ಸಭೆಯ ನಂತರ ಹೇಳಿದರು.

‘ನಿತೀಶ್‌ ಅವರು ಪಕ್ಷದ ನೇತೃತ್ವವನ್ನು ಮುಂದುವರಿಸಬೇಕು ಮತ್ತು ಪಕ್ಷ ಹಾಗೂ ರಾಜ್ಯ ಸರ್ಕಾರದ ನಡುವೆ ಸಮನ್ವಯ­ಕಾರರಾಗಿ ಕಾರ್ಯ ನಿರ್ವ­ಹಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು’ ಎಂದೂ ಅವರು ತಿಳಿಸಿದರು.

ಮಿತಭಾಷಿ ಜೀತನ್‌ ಮಾಂಝಿ
ಪಟ್ನಾ: ಬಿಹಾರದ ನೂತನ ಮುಖ್ಯ­ಮಂತ್ರಿ­ಯಾಗಿ ಜೀತನ ರಾಂ ಮಾಂಝಿ ಆಯ್ಕೆಯಾಗಿದ್ದಾರೆ. ಗಯಾ ಸಮೀಪದ ಮಖ್ತೂಂ­ಪುರದ ಜೆಡಿಯು ಶಾಸಕರಾ­ಗಿರುವ 68 ವರ್ಷದ ಜೀತನ ರಾಂ ಮಾಂಝಿ ಅವರು 2005ರಲ್ಲಿ ಮೊದಲ ಬಾರಿಗೆ ನಿತೀಶ್‌ ಸಂಪುಟವನ್ನು ಸೇರಿದ್ದರು.

ಈ ಹಿಂದಿನ ಆರ್‌ಜೆಡಿ ಸರ್ಕಾರದಲ್ಲಿ ಮಾಂಝಿ ಅವರು ಶಿಕ್ಷಣ ಸಚಿವರಾಗಿ­ದ್ದಾಗ ಅವರ ವಿರುದ್ಧ ಪ್ರಕರಣವೊಂದು ದಾಖ­ಲಾಗಿತ್ತು ಎಂಬ ವರದಿಗಳು ಪ್ರಕಟ­ಗೊಂಡಾಗ  ಮುಜುಗರ­ಕ್ಕೊಳಗಾದ ನಿತೀಶ್‌ ಕುಮಾರ್‌, ರಾಜೀನಾಮೆ ನೀಡುವಂತೆ ಮಾಂಝಿ ಅವರಿಗೆ ಸೂಚಿಸಿದ್ದರು. ನಂತರ, 2006ರಲ್ಲಿ ಆ ಪ್ರಕರಣ­­ದಲ್ಲಿ ಖುಲಾಸೆ ಗೊಂಡಾಗ  ಮಾಂಝಿ ಅವರು ಮತ್ತೆ ಸಂಪುಟಕ್ಕೆ ಸೇರ್ಪಡೆ­ಗೊಂಡಿದ್ದರು.

ನಿತೀಶ್‌ ಕುಮಾರ್‌ ಸಂಪುಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾಗಿದ್ದ ಮಾಂಝಿ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗಯಾ ಲೋಕಸಭಾ ಕ್ಷೇತ್ರದಿಂದ (ಮೀಸಲು)  ಬಿಜೆಪಿಯ ಹರಿ ಮಾಂಝಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು.

ಚುನಾವಣೆಯಲ್ಲಿ ಪಕ್ಷವು ಹೀನಾಯ ಪ್ರದರ್ಶನ ತೋರಿದ ಮೂರು ದಿನಗಳ ಬಳಿಕ ಮಿತಭಾಷಿ ಮಾಂಝಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ­ಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT