ADVERTISEMENT

ಮಾಂಸದಂಗಡಿ ಮುಚ್ಚಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಮಾಂಸದಂಗಡಿ ಮುಚ್ಚಿ ಪ್ರತಿಭಟನೆ
ಮಾಂಸದಂಗಡಿ ಮುಚ್ಚಿ ಪ್ರತಿಭಟನೆ   

ಲಖನೌ: ಕಸಾಯಿ ಖಾನೆಗಳ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ತೆಗೆದುಕೊಂಡಿರುವುದನ್ನು ಪ್ರತಿಭಟಿಸಿ ಮಾಂಸ ಮಾರಾಟಗಾರರು ಸೋಮವಾರ ಉತ್ತರಪ್ರದೇಶದಾದ್ಯಂತ ಸಾವಿರಾರು ಮಾಂಸದ ಅಂಗಡಿಗಳನ್ನು ಮುಚ್ಚಿ  ಪ್ರತಿಭಟನೆ ನಡೆಸಿದರು.

ಈ ಮಧ್ಯೆ, ಪರವಾನಗಿ ಪಡೆಯದೆ ನಡೆಸಲಾಗುತ್ತಿದ್ದ ಕಸಾಯಿಖಾನೆಗಳನ್ನು ಮಾತ್ರ ಮುಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಸ್ಪಷ್ಟನೆ: ಸೋಮವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಆರೋಗ್ಯ ಸಚಿವ ಸಿದ್ಧಾರ್ಥ ಸಿಂಗ್‌, ‘ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಪರವಾನಗಿ ಹೊಂದಿದ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕುರಿ ಮತ್ತು ಕೋಳಿ ಮಾಂಸದ ಅಂಗಡಿಗಳ ಮೇಲೆ ದಾಳಿ ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ ಎಂದು ಅವರು ಹೇಳಿದರು.

ಪರವಾನಗಿ ಹೊಂದಿದ ಮಾಂಸದ ಅಂಗಡಿ ಮಾಲೀಕರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.

ADVERTISEMENT

ಸಿಗದ ಮಾಂಸ: ಕಸಾಯಿಖಾನೆ, ಮಾಂಸದ ಅಂಗಡಿಗಳು ಮುಚ್ಚಿದ್ದರಿಂದ ಮತ್ತು ಪ್ರತಿಭಟನೆ ಕಾರಣದಿಂದ ಲಖನೌ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಾಂಸದ ಕೊರತೆ ಉಂಟಾಯಿತು.
ಅಧಿಕಾರಿಗಳು, ಕುರಿ ಮತ್ತು ಕೋಳಿ ಮಾಂಸ ಕತ್ತರಿಸುವ ಕಸಾಯಿಖಾನೆಗಳ ಮೇಲೂ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅಲಿಗಂಜ್ ಪ್ರದೇಶದ ಮಾಂಸದ ವ್ಯಾಪಾರಿಗಳು ದೂರಿದರು.
ಮಾಂಸ ಸರಬರಾಜು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ.  ಅಂಗಡಿ ಮುಚ್ಚಿರುವುದರಿಂದ ಸಂಸಾರ ನಡೆಸುವುದು ಕಷ್ಟವಾಗಿದೆ ಅವರು ಅಳಲು ತೋಡಿಕೊಂಡರು.

ಆದಿತ್ಯನಾಥ ತಾರಾ ಪ್ರಚಾರಕ?

ಪ್ರಜಾವಾಣಿ ವಾರ್ತೆ
ನವದೆಹಲಿ:  ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ.
ಆದಿತ್ಯನಾಥ ಅವರನ್ನು ತಾರಾ ಪ್ರಚಾರಕರನ್ನಾಗಿ ಮಾಡಿ ಮತದಾರರನ್ನು ಸೆಳೆಯುವ ತಂತ್ರ ರೂಪಿಸಲು ಬಿಜೆಪಿ ಮುಂದಾಗಿದೆ.
ಕಟ್ಟಾ ಹಿಂದುತ್ವವಾದಿ  ಆಗಿರುವ ಆದಿತ್ಯನಾಥ ಮಾತಿಗೆ ಜನರು ಆಕರ್ಷಿತರಾಗುತ್ತಾರೆ. ಆದ್ದರಿಂದ ಅವರನ್ನೇ ತಾರಾ ಪ್ರಚಾರಕರನ್ನಾಗಿ ಮಾಡಬೇಕು ಎಂದು ಬಿಜೆಪಿಯ ಗುಜರಾತ್ ಘಟಕವು ಸೂಚಿಸಿದೆ.

ಅನಧಿಕೃತ ಕಸಾಯಿಖಾನೆ ವಿರುದ್ಧ ಮಾತ್ರ ಕ್ರಮ
ನವದೆಹಲಿ: ಉತ್ತರಪ್ರದೇಶ ಸರ್ಕಾರವು ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಸೋಮವಾರ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.