ADVERTISEMENT

ಮಾಜಿ ಸಚಿವ ಮುರಳಿ ದೇವ್ರಾ ನಿಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಮುಂಬೈ (ಪಿಟಿಐ): ದೀರ್ಘ ಕಾಲ­ದಿಂದ ಅನಾರೋಗ್ಯ­ಪೀಡಿತರಾಗಿದ್ದ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್‌ನ ಹಿರಿಯ ಧುರೀಣ ಮುರಳಿ ದೇವ್ರಾ ಸೋಮವಾರ ಬೆಳಿಗ್ಗೆ ಇಲ್ಲಿ ನಿಧನ ಹೊಂದಿದರು.

ಆಪ್ತರ ಮಧ್ಯೆ ಮುರಳಿ ಭಾಯಿ ಎಂದೇ ಪ್ರಸಿದ್ಧರಾಗಿದ್ದ 77 ವರ್ಷ ವಯಸ್ಸಿನ ದೇವ್ರಾ ಅವರು ಬೆಳಗಿನ ಜಾವ 3.25ಕ್ಕೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಮಾಜಿ ಸಂಸದ ಮಿಲಿಂದ್ ದೇವ್ರಾ ಸೇರಿದಂತೆ ಇಬ್ಬರು ಪುತ್ರರಿದ್ದಾರೆ.

ಯುಪಿಎ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ಹೊಂದಿದ್ದ ದೇವ್ರಾ ಅವರು ಮೂರನೇ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಪೆಟ್ರೋಲಿಯಂ ಖಾತೆಯನ್ನು ದೀರ್ಘ ಕಾಲ ನಿರ್ವಹಿಸಿದ್ದ ಅವರು ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಅವರು, 22 ವರ್ಷಗಳ ಕಾಲ ಮುಂಬೈ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.

ಗಾಂಧಿ ಕುಟುಂಬಕ್ಕೆ ತುಂಬಾ ವಿಧೇಯರಾಗಿದ್ದ ದೇವ್ರಾ ಅವರು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ನಿಕಟವರ್ತಿಯಾಗಿದ್ದರು. ದೇಶದ ಪ್ರಮುಖ ಉದ್ಯಮಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ನಿಧಿ ಸಂಗ್ರಹಕಾರರಾಗಿದ್ದರು.
ಪ್ರಧಾನಿ ಸಂತಾಪ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅನೇಕ ಕಾಂಗ್ರೆಸ್ ಮುಖಂಡರು ದೇವ್ರಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

‘ನಿನ್ನೆಯಷ್ಟೇ ದೇವ್ರಾ ಕುಟುಂಬದವರನ್ನು ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಇಂದು (ಸೋಮವಾರ) ಅವರ ನಿಧನದ ಸುದ್ದಿ ಕೇಳುತ್ತಿರುವುದು ದುರದೃಷ್ಟಕರ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಮಧ್ಯಾಹ್ನ ನಡೆದ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ, ಪ್ರಿಯಾಂಕಾ ಮತ್ತು ರಾಬರ್ಟ್‌ ವಾಧ್ರಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.