ADVERTISEMENT

ಮಾರ್ಚ್‌ 1 ಕ್ಕೆ ಮುಫ್ತಿ ಪ್ರಮಾಣ ವಚನ

ಬಿಜೆಪಿ –ಪಿಡಿಪಿ ಮೈತ್ರಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 7:07 IST
Last Updated 27 ಫೆಬ್ರುವರಿ 2015, 7:07 IST

ನವದೆಹಲಿ (ಪಿಟಿಐ): ರಾಜ­ಕೀಯ­ವಾಗಿ ಅತಂತ್ರವಾಗಿದ್ದ ಜಮ್ಮು ಮತ್ತು ಕಾಶ್ಮೀರ­ದಲ್ಲಿ ಬಿಜೆಪಿ –ಪಿಡಿಪಿ ಮೈತ್ರಿ ಸರ್ಕಾರ ಮಾರ್ಚ್‌ 1 ರಿಂದ ಅಸ್ತಿತ್ವಕ್ಕೆ ಬರಲಿದೆ.

ಸರ್ಕಾರ ರಚನೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ತಲೆದೋರಿದ್ದ ಬಿಕ್ಕಟ್ಟು ಬಗೆಹರಿದಿದ್ದು,   ಜಮ್ಮು ಮತ್ತು ಕಾಶ್ಮೀರದ ಮುಖ್ಯ­ಮಂತ್ರಿ­ಯಾಗಿ ಪಿಡಿಪಿ ನಾಯಕ ಮುಫ್ತಿ ಮೊಹಮದ್‌ ಸಯೀದ್‌ (79) ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಫ್ತಿ ಅವರ ಜತೆಗೆ 25 ಸದಸ್ಯರ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬರಲಿದೆ. ಇವರಲ್ಲಿ ಬಿಜೆಪಿಯ 12 ಮತ್ತು ಪಿಡಿಪಿಯ 13 ಸಚಿವರು ಸೇರಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಗೆ ನೀಡಲಾಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಎರಡೂ ಪಕ್ಷಗಳ ನಡುವೆ ಸಮನ್ವ­ಯತೆ ಸಾಧಿಸಲು ಅತ್ಯಂತ ಎಚ್ಚರಿಕೆ­ಯಿಂದ ರೂಪಿಸಲಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ  ಹೊಸ ಮೈತ್ರಿ ಸರ್ಕಾರ ರಚನೆಯಾಗಿದೆ. ಉಭಯ ಪಕ್ಷಗಳ ಮಧ್ಯೆ ಕಗ್ಗಂಟಾ­ಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ಕಲಂಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳು ಪಟ್ಟು ಸಡಿಲಿಸಿವೆ. ಈ ವಿಚಾರವಾಗಿ ಬಿಜೆಪಿ ಲಿಖಿತ ಭರವಸೆ  ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಶಸ್ತ್ರ ಪಡೆಗಳ ವಿಶೇಷ ಅಧಿ­ಕಾರ ಕಾಯ್ದೆ­ (ಎಫ್‌­ಎಸ್‌ಪಿಎ) ಅಂಶಗಳನ್ನೂ ಸಾಮಾನ್ಯ ಕನಿಷ್ಠ  ಕಾರ್ಯಕ್ರಮ ಒಳಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಯೀದ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT