ADVERTISEMENT

ಮುಂಬೈ: ಮೆಟ್ರೊ ರೈಲು ಓಡಾಟ ಆರಂಭ

ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 19:30 IST
Last Updated 8 ಜೂನ್ 2014, 19:30 IST

ಮುಂಬೈ (ಪಿಟಿಐ): ಮುಂಬೈ ಮಹಾನಗರದ ಮೆಟ್ರೊ ರೈಲು ಸೇವೆಗೆ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಅವರು ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. ವರ್ಸೋವಾ ನಿಲ್ದಾಣದಿಂದ ಪಶ್ಚಿಮ ಭಾಗದ ಉಪನಗರ ಮಧ್ಯೆ ಮೊದಲ ಮೆಟ್ರೊ ರೈಲು   ಸಂಚರಿಸುವ ಮೂಲಕ ವಾಣಿಜ್ಯ ನಗರಿಯ ಜನರ ಬಹುಕಾಲದ ಕನಸು ನನಸಾಯಿತು.

ನಿಗದಿತ ಅವಧಿಗಿಂತ ಮೂರೂವರೆ ವರ್ಷಗಳಷ್ಟು ಕಾಲ ವಿಳಂಬವಾಗಿ ಮುಂಬೈನಲ್ಲಿ ಮೆಟ್ರೊ ರೈಲು ಓಡಾಟ ಆರಂಭವಾದರೂ ಜನರು ಈ ರೈಲನ್ನು ಸಂಭ್ರಮದಿಂದಲೇ ಬರಮಾಡಿ­ಕೊಂಡರು. ಮೊದಲ ದಿನವೇ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸಿದರು.
ದಿನಕ್ಕೆ ಸುಮಾರು 70 ಲಕ್ಷ ಜನರು ಸ್ಥಳೀಯ ರೈಲುಗಳಲ್ಲಿ ಸಂಚರಿಸುತ್ತಾರೆ ಎಂಬ ಅಂದಾಜಿದೆ.

ದೇಶದಲ್ಲಿ ಮೆಟ್ರೊ ರೈಲು ಸೇವೆ ಆರಂಭವಾದ ನಾಲ್ಕನೇ ನಗರ ಎಂಬ ಕೀರ್ತಿಗೂ ಮುಂಬೈ ಪಾತ್ರವಾಯಿತು. ಕೋಲ್ಕತ್ತ, ದೆಹಲಿ ಮತ್ತು ಬೆಂಗಳೂರು­ಗಳಲ್ಲಿ ಈಗಾಗಲೇ ಮೆಟ್ರೊ ರೈಲು ಸೇವೆ ಚಾಲನೆಯಲ್ಲಿದೆ. 

‘ಮುಂಬೈ ಮೆಟ್ರೊ ಒನ್‌’ (ಎಂಎಂಒಪಿಎಲ್‌) ರೈಲು ಸಂಚಾರಕ್ಕೆ ಬೆಳಿಗ್ಗೆ 10.10ಕ್ಕೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಚವಾಣ್‌, ‘2006ರಲ್ಲಿ ಮೆಟ್ರೊ ರೈಲು ಯೋಜನೆ ರೂಪಿತವಾದರೂ, ಇದು ಅನುಷ್ಠಾನವಾಗಲು ಸಾಕಷ್ಟು ಅಡೆತಡೆಗಳು ಎದುರಾದವು. ಈ ರೈಲು ಎತ್ತರಿಸಿದ ಮಾರ್ಗದಲ್ಲಿ ಸಂಚರಿಸುವ ಕಾರಣ ಕಾಮಗಾರಿಗಳು ಕುಂಟುತ್ತಾ ಸಾಗಿದವು’ ಎಂದರು. 

‘ಈಗಾಗಲೇ ಮಾನೊ ರೈಲು ಸೇವೆ (ಕಳೆದ ಫೆಬ್ರುವರಿಯಲ್ಲಿ ಚಾಲನೆ) ಆರಂಭವಾಗಿದ್ದು, ಇದೀಗ ಮೆಟ್ರೊ ರೈಲು ಕೂಡ ಓಡಾಟ ಆರಂಭಿಸಿದೆ. ಈ ಮೂಲಕ ನಾವು 21 ಶತಮಾನಕ್ಕೆ ಅಕ್ಷರಶಃ ಪದಾರ್ಪಣೆ ಮಾಡಿದ್ದೇವೆ’ ಎಂದರು. ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ರಿಲಯನ್ಸ್‌ ಅನಿಲ್‌ ಧೀರೂ­ಭಾಯಿ ಅಂಬಾನಿ ಸಮೂಹದ (ಎಡಿಎಜಿ) ಅಧ್ಯಕ್ಷ ಅನಿಲ್‌ ಅಂಬಾನಿ ಮತ್ತು ಅವರ ಪತ್ನಿ ಟೀನಾ ಅಂಬಾನಿ, ಸಂಸದರು, ಶಾಸಕರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.