ADVERTISEMENT

ಮುಲಾಯಂ ಜನ್ಮದಿನಕ್ಕೆ ಉಗ್ರರ ಹಣ!

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ರಾಮ್‌ಪುರ, ಉತ್ತರಪ್ರದೇಶ (ಪಿಟಿಐ): ಸಮಾಜ­ವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರ 75ನೇ ಹುಟ್ಟುಹಬ್ಬ ಸಮಾರಂಭಕ್ಕೆ ಯಾರು ಹಣ ನೀಡಿದರು ಎಂಬ  ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಭಯೋ­ತ್ಪಾದನಾ ಸಂಘಟನೆ ತಾಲಿಬಾನ್‌ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಮಾರಂಭಕ್ಕೆ ಹಣ ನೀಡಿ­ದರು ಎಂಬ ಪಕ್ಷದ ಮುಖಂಡ ಮತ್ತು ಉತ್ತರ ಪ್ರದೇಶದ ಸಚಿವ ಅಜಂ ಖಾನ್‌ ಹೇಳಿಕೆ ವಿವಾದ ಸೃಷ್ಟಿಸಿದೆ.

ಶುಕ್ರವಾರ ಮತ್ತು ಶನಿವಾರ ಜೌಹರ್‌ ವಿಶ್ವವಿದ್ಯಾ­ಲಯದ ಆವರಣ­ದಲ್ಲಿ ಹುಟ್ಟು ಹಬ್ಬ ಪ್ರಯುಕ್ತ ಅದ್ಧೂರಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾ­ರಂಭ ಸ್ಥಳಕ್ಕೆ ಮುಲಾಯಂ ಅವರು ವಿಕ್ಟೋರಿಯಾ ಶೈಲಿಯ, ಲಂಡನ್‌­­ನಿಂದ ಆಮದು ಮಾಡಿ­ಕೊಂಡ ಕುದುರೆ­ಗಾಡಿ­ಯಲ್ಲಿ ಬಂದರು. ಮುಲಾಯಂ ಅವರು 75 ಅಡಿ ಉದ್ದದ ಕೇಕ್‌ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ­ಕೊಳ್ಳಲಿ­ದ್ದಾರೆ.

ಎರಡು ದಿನಗಳ ಕಾರ್ಯ­ಕ್ರಮವನ್ನು ಉತ್ತರ ಪ್ರದೇಶದ ಆಡಳಿತ ಪಕ್ಷ ಎಸ್‌ಪಿ ಸಂಘಟಿಸಿದ್ದು, ಖಾನ್‌ ಅವರ ಕ್ಷೇತ್ರ ರಾಮ್‌ಪುರದಲ್ಲಿ ನಡೆಯುತ್ತಿದೆ. ಜೌಹರ್‌ ವಿಶ್ವವಿದ್ಯಾಲಯಕ್ಕೆ ಖಾನ್‌ ಅವರು ಕುಲಾಧಿಪತಿ. ಮುಲಾಯಂ ಅವರು ಸಮಾರಂಭ ಸ್ಥಳಕ್ಕೆ ಬಂದ ನಂತರ, ಸಮಾರಂಭಕ್ಕೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಅಜಂ  ಖಾನ್‌ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಯಿತು.

‘ಹಣ ಎಲ್ಲಿಂದ ಬಂತು ಎಂಬುದು ಯಾಕೆ ಮುಖ್ಯ? ಸ್ವಲ್ಪ ಹಣ ತಾಲಿಬಾನ್‌ನಿಂದ ಬಂತು. ಸ್ವಲ್ಪ ಹಣ ಅಬು ಸಲೇಂ ಮತ್ತು ಸ್ವಲ್ಪ ಹಣ ದಾವೂದ್‌ ಕೊಟ್ಟಿದ್ದಾರೆ’ ಎಂದು ಖಾನ್‌ ವ್ಯಂಗ್ಯವಾಗಿ ಹೇಳಿದ್ದಾರೆ. ವಿಶ್ವ ಪ್ರಸಿದ್ಧ ಪ್ರೇಮ ಸ್ಮಾರಕ ತಾಜ್‌ಮಹಲನ್ನು ವಕ್ಫ್‌ ಮಂಡಳಿಯ ಅಧೀನಕ್ಕೆ ನೀಡಬೇಕು ಎಂದು ಗುರು­ವಾರ ಹೇಳಿಕೆ ನೀಡಿದ್ದ ಅಜಂ ಖಾನ್‌ ವಿವಾದಕ್ಕೆ ಕಾರಣರಾಗಿದ್ದರು. ತಾಜ್‌­ಮಹಲ್‌ ಒಂದು ಸಮಾಧಿ. ಹಾಗಾಗಿ ಅದನ್ನು ವಕ್ಫ್‌ ಮಂಡಳಿಗೆ ವಹಿಸಬೇಕು. ಅಲ್ಲಿನ ವರಮಾನವೂ ವಕ್ಫ್‌ ಮಂಡಳಿಗೆ ಸೇರಬೇಕು ಎಂದು ಖಾನ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.