ADVERTISEMENT

ಮುಸ್ಲಿಂ ಯುವತಿಗೆ ಮನೆ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಮುಂಬೈ: ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣವೊಡ್ಡಿ ಇಲ್ಲಿನ ಬಿಲ್ಡರ್‌ ಒಬ್ಬರು ಮಹಿಳೆಯೊಬ್ಬರಿಗೆ ಫ್ಲಾಟ್ ಬಾಡಿಗೆಗೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

ಇಲ್ಲಿನ ಕಂಪೆನಿಯೊಂದು ಮುಸ್ಲಿಂ ಯುವಕನೊಬ್ಬನಿಗೆ ಕೆಲಸ ನಿರಾಕರಿಸಿದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಸಾರ್ವಜನಿಕ ಸಂಪರ್ಕ ಸಂಸ್ಥೆಯ ಉದ್ಯೋಗಿಯಾಗಿರುವ ಮಿಸ್ಬಾ ಖಾದ್ರಿ (25) ಅವರಿಗೆ ಮುಂಬೈನ ವಡಾಲ ಪ್ರದೇಶದಲ್ಲಿರುವ ಫ್ಲಾಟ್‌ ಅನ್ನು ಬಾಡಿಗೆಗೆ ನೀಡಲು ಬಿಲ್ಡರ್‌ ಒಬ್ಬರು ನಿರಾಕರಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಈ ಹಿಂದೆ ಮುಂಬೈನ ಕಾಂಡಿವಲಿಯ ಫ್ಲಾಟ್‌ ಒಂದರಲ್ಲಿ ಬಾಡಿಗೆಗಿದ್ದ ಖಾದ್ರಿ ಅವರು, ಅವಧಿ ಮುಗಿದ ಕಾರಣ ಫ್ಲಾಟ್‌ ಅನ್ನು ಈಗ ತೆರವು ಮಾಡಿದ್ದಾರೆ.

‘ಸಾಕಷ್ಟು ಹುಡುಕಿದ ನಂತರ ವಡಾಲಾದಲ್ಲಿ ಒಂದು ಮನೆ ಬಾಡಿಗೆಗೆ ಸಿಕ್ಕಿತ್ತು. ಮಧ್ಯವರ್ತಿಯ ಮೂಲಕ ₨ 24 ಸಾವಿರ ಮುಂಗಡ ಪಾವತಿಸಿದ್ದೆ. ಆದರೆ ಮನೆಗೆ ತೆರಳುವ ಒಂದು ದಿನ ಮೊದಲು ಕರೆ ಮಾಡಿದ ಮಧ್ಯವರ್ತಿ, ಮುಸ್ಲಿಮರಿಗೆ ಮನೆ ಬಾಡಿಗೆಗೆ  ನೀಡಬಾರದೆಂದು ಬಿಲ್ಡರ್‌ ಅವರು ಹೇಳಿದ್ದಾರೆ. ನೀವು ಮನೆಗೆ ಬರುವ ಅವಶ್ಯಕತೆ ಇಲ್ಲ ಎಂದರು’ ಎಂದು ಅವರು ಆರೋಪಿಸಿದ್ದಾರೆ.

‘ಅವಧಿ ಮುಗಿದಿದ್ದರಿಂದ ಹಿಂದಿನ ಫ್ಲಾಟ್‌ ಅನ್ನು ಖಾಲಿ ಮಾಡಿದ್ದೇನೆ. ಈಗ ಫ್ಲಾಟ್‌ ಬಾಡಿಗೆಗೆ ನೀಡಲು ನಿರಾಕರಿಸಿದ್ದರಿಂದ ನಾನು ಮತ್ತು ನನ್ನ ಗೆಳತಿಯರು ಪೇಯಿಂಗ್‌ ಗೆಸ್ಟ್ ವಸತಿಯೊಂದರಲ್ಲಿ  ಉಳಿದುಕೊಂಡಿದ್ದೇವೆ’ ಎಂದು ಖಾದ್ರಿ ಅವರು ಹೇಳಿದ್ದಾರೆ.  ಬಿಲ್ಡರ್‌ ಅವರ ಕಚೇರಿಯನ್ನು ನೇರವಾಗಿ ಸಂಪರ್ಕಿಸಿದಾಗ, ಮುಸ್ಲಿಮರಿಗೆ ಮನೆ ನೀಡಬಾರದೆಂದು ನಮ್ಮ ನೀತಿಯಲ್ಲಿದೆ ಎಂದು
ಹೇಳಿದರು. ಅಲ್ಲದೆ, ಮುಂದಿನ 5–6 ವರ್ಷಗಳ ನಂತರ ಮುಸ್ಲಿಮರಿಗೂ ಮನೆ ಬಾಡಿಗೆಗೆ ನೀಡಬಹುದು ಎಂದು ಉತ್ತರಿಸಿದರು ಎಂದು  ಖಾದ್ರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.