ADVERTISEMENT

ಮೃತರ ಕುಟುಂಬಕ್ಕೆರೂ 5 ಲಕ್ಷ

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪರಿಹಾರ ಘೋಷಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST

ಹೈದರಾಬಾದ್‌ (ಪಿಟಿಐ): ಚಂಡ­ಮಾರುತ­ದಲ್ಲಿ ಮೃತಪಟ್ಟಿರುವ ವ್ಯಕ್ತಿ­ಗಳ ಕುಟುಂಬಕ್ಕೆ ಆಂಧ್ರ ಸರ್ಕಾರವು ತಲಾ ರೂ೫ ಲಕ್ಷ ಪರಿಹಾರ ಘೋಷಿಸಿದೆ.

ಈ ಅವಘಡದಲ್ಲಿ ಕೈ ಕಾಲು ಅಥವಾ ಕಣ್ಣು ಕಳೆದುಕೊಂಡವ­ರಿಗೆ ತಲಾ ರೂ೧ ಲಕ್ಷ ಪರಿಹಾರ ಘೋಷಿ­ಸಿದೆ. ಗಂಭೀರ­ವಾಗಿ ಗಾಯಗೊಂಡು ವಾರ­ಕ್ಕಿಂತಲೂ ಹೆಚ್ಚಿನ ಸಮಯ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಬೇಕಾದವರಿಗೆ ತಲಾ ರೂ೫೦,೦೦೦ ಹಾಗೂ ಉಳಿದ ಗಾಯಾ­ಳುಗಳಿಗೆ ತಲಾ ರೂ೧೫,೦೦೦ ಪರಿಹಾರ ಸಿಗಲಿದೆ.  ಸಂಪೂರ್ಣ ಹಾನಿಯಾದ ಕಾಂಕ್ರೀಟ್‌್ ಮನೆಗಳಿಗೆ  ತಲಾ ರೂ ೫೦,೦೦೦ ಪರಿಹಾರದ ಜತೆಗೆ   ಇಂದಿರಾ ಆವಾಸ್‌್ ಯೋಜನೆ ಅಡಿ ಹೊಸ ಮನೆ ನಿರ್ಮಿಸಿಕೊಡಲಾಗು­ತ್ತದೆ. ಮಣ್ಣಿನ ಗೋಡೆ ಹಾಗೂ ಹುಲ್ಲಿನ ಹೊದಿ­­ಕೆಯ ಮನೆಗಳಿಗೆ ತಲಾ ರೂ೨೫,೦೦೦ ಪರಿಹಾರ ಕೊಡ­ಲಾಗುತ್ತದೆ.

ಭುವನೇಶ್ವರ ವರದಿ: ‘ಹುದ್‌ ಹುದ್‌’ ಚಂಡಮಾರುತಕ್ಕೆ ಬಲಿಯಾದವರ ಕುಟುಂಬಕ್ಕೆ ಒಡಿಶಾ ಸರ್ಕಾರ ತಲಾ ರೂ ೧.೫ ಲಕ್ಷ ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನವೀನ್‌್ ಪಟ್ನಾಯಕ್‌್ ಅವರು ಚಂಡಮಾರುತ ಪೀಡಿತ ಪ್ರದೇಶ­ಗಳ ವೈಮಾನಿಕ ಸಮೀಕ್ಷೆ ನಡೆಸಿದರು. ‘ಅಪಾರ ಹಾನಿ ಆಗಿದೆ. ನಾವು ಕೇಂದ್ರದ ನೆರವು ಕೇಳುತ್ತೇವೆ’ ಎಂದು ಪಟ್ನಾಯಕ್‌್ ತಿಳಿಸಿದ್ದಾರೆ.

‘ಸಾವಿರಾರು ಕೋಟಿ ನಷ್ಟ’
ವಿಶಾಖಪಟ್ಟಣ (ಪಿಟಿಐ): ‘
ಹುದ್‌ ಹುದ್‌’ ಚಂಡಮಾರುತದಿಂದ ಆಂಧ್ರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮಂಗಳವಾರ ಹೇಳಿದ್ದಾರೆ.

ಆಂಧ್ರದ ಪೂರ್ವ ವಿದ್ಯುತ್‌ ವಿತರಣಾ ಕಂಪೆನಿಯೊಂದಕ್ಕೇ ರೂ೪೦ ಸಾವಿರ ಕೋಟಿ  ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬಿರುಗಾಳಿಯ ಹೊಡೆತಕ್ಕೆ ಸುಮಾರು ೧೬ ಸಾವಿರ ವಿದ್ಯುತ್‌ ಕಂಬಗಳು ಕಿತ್ತು ಬಿದ್ದಿವೆ. ೬,೦೦೦ ವಿದ್ಯುತ್‌್ ಪರಿವರ್ತಕ­ಗಳು ಹಾಳಾಗಿವೆ. ಹೈ ಟೆನ್ಷನ್‌್ ಪ್ರಸರಣ ಮಾರ್ಗ, ಉಪಕೇಂದ್ರಗಳಿಗೆ ಕೂಡ ಹಾನಿಯಾಗಿದೆ.

ವಿಶಾಖಪಟ್ಟಣ ಉಕ್ಕು ಘಟಕ–ರೂ೧,೦೦೦ ಕೋಟಿ, ನೌಕಾ ಪಡೆ–ರೂ೨,೦೦೦ ಕೋಟಿ, ಆಂಧ್ರ ವಿಶ್ವವಿದ್ಯಾಲಯ–ರೂ೩೦೦ ಕೋಟಿ, ವಿಶಾಖಪಟ್ಟಣ ವಿಮಾನ ನಿಲ್ದಾಣ–ರೂ ೫೦೦ ಕೋಟಿ ಅಂದಾಜು ನಷ್ಟ ಆಗಿದೆ. ಇಷ್ಟೊಂದು ನಷ್ಟ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಪ್ರಧಾನಿಗೆ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ನಾಯ್ಡು ಸುದ್ದಿಗಾರರಿಗೆ ತಿಳಿಸಿದರು. ‘ವಿಶಾಖಪಟ್ಟಣ ಉಕ್ಕು ಘಟಕದಿಂದ ಪ್ರತಿದಿನ ರೂ೩೦ಕೋಟಿಯಿಂದ ರೂ ೪೦ ಕೋಟಿ  ವಹಿವಾಟು ನಷ್ಟ ಆಗಿದೆ. ರಸ್ತೆ ಸಂಪರ್ಕ ಜಾಲಕ್ಕೆ ಸುಮಾರು ರೂ೮೦೦ ಕೋಟಿ ಹಾನಿ ಆಗಿದೆ’ ಎಂದು ವಿವರಿಸಿದರು.

ಅಗತ್ಯ ವಸ್ತುಗಳಿಗೆ ಜನರ ಪರದಾಟ
ಚಂಡಮಾರುತದಿಂದ ತತ್ತರಿಸಿರುವ ವಿಶಾಖಪಟ್ಟಣದ ಜನ ವಿದ್ಯುತ್‌್ ಹಾಗೂ ಅಗತ್ಯ ವಸ್ತುಗಳಿಗಾಗಿ ಪರಿತಪಿಸುತ್ತಿದ್ದಾರೆ. ಕುಡಿಯುವ ನೀರು, ಹಾಲು ಹಾಗೂ ದಿನಸಿ ಪದಾರ್ಥಗಳಿಗಾಗಿ ನಗರದಲ್ಲಿ ಮಂಗಳವಾರ ಹಾಹಾಕಾರ ಕಂಡುಬಂತು. ಅಧಿಕಾರಿಗಳು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಲ್ಲ ಎಂದು ಜನ ಹಿಡಿಶಾಪ ಹಾಕಿದರು. ಪ್ರತಿಕೂಲ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ವ್ಯಾಪಾರಿಗಳು ಒಂದು ಲೀಟರ್‌್ ನೀರಿನ ಬಾಟಲಿಯನ್ನು ರೂ ೩೦೦ಕ್ಕೆ ಮಾರಾಟ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT