ADVERTISEMENT

ಮೋದಿ ರೈತ ವಿರೋಧಿ

ಭೂಸ್ವಾಧೀನ ಮಸೂದೆ: ಎನ್‌ಡಿಎ ವಿರುದ್ಧ ಗುಡುಗಿದ ಸೋನಿಯಾ, ರಾಹುಲ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:38 IST
Last Updated 19 ಏಪ್ರಿಲ್ 2015, 19:38 IST

ನವದೆಹಲಿ:
ಕೈಗಾರಿಕೋದ್ಯಮಿಗಳಿಂದ ಪಡೆದಿರುವ ಸಾಲಕ್ಕೆ ಪ್ರತಿಯಾಗಿ ರೈತರ ಭೂಮಿಯನ್ನು ಅವರಿಗೆ ಹಸ್ತಾಂತರಿಸಿ ಋಣಮುಕ್ತರಾಗಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದ್ದು, ಲೋಕಸಭೆ ಚುನಾವಣೆ ವೇಳೆ ಕಾರ್ಪೋರೇಟ್‌ ವಲಯದಿಂದ ಪಡೆದಿರುವ ಭಾರಿ ಸಾಲ ತೀರಿಸಲು ಭೂಸ್ವಾಧೀನ ಮಸೂದೆ ಜಾರಿಗೆ ತರುತ್ತಿದೆ’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದರು.


ಇಲ್ಲಿಯ ರಾಮಲೀಲಾ ರಾಮಲೀಲಾ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಿಸಾನ್‌– ಖೇತ್‌ ಮಜ್ದೂರ್‌ ಸಮಾವೇಶದಲ್ಲಿ ಭಾಷಣ ಮಾಡಿದ ರಾಹುಲ್‌ ಗಾಂಧಿ, ರೈತರು ಮತ್ತು ಆದಿವಾಸಿಗಳಿಗೆ ವಿರುದ್ಧವಾಗಿರುವ ಭೂಸ್ವಾಧೀನ ಮಸೂದೆ ವಾಪಸ್‌ ಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

ಐವತ್ತಾರು ದಿನಗಳ ಸುದೀರ್ಘ ರಜೆಯ ಬಳಿಕ ರಾಜಧಾನಿಗೆ ಹಿಂತಿರುಗಿರುವ ರಾಹುಲ್‌, ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಪ್ರಧಾನಿ ಮೋದಿ ಲೋಕಸಭೆ ಚುನಾವಣೆ ಸಮಯದಲ್ಲಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿಂದ ಸಾವಿರಾರು ಕೋಟಿ ಸಾಲ ಪಡೆದಿದ್ದಾರೆ. ನಿಮ್ಮ ಜಮೀನನ್ನು ಸ್ವಾಧೀನಪಡಿಸಿಕೊಂಡು ಅವರಿಗೆ ಹಸ್ತಾಂತರಿಸುವ ಮೂಲಕ ಋಣ ಮುಕ್ತರಾಗಲು ಹೊರಟಿದ್ದಾರೆಂದು ರಾಹುಲ್‌ ದೂರಿದರು.

ಹರಿಯಾಣ, ರಾಜಸ್ತಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನರು ಕಾಂಗ್ರೆಸ್‌ ಮುಖಂಡರ ಭಾಷಣ ಕೇಳಲು ಮೂರ್ನಾಲ್ಕು ಗಂಟೆ ಸುಡು ಬಿಸಿಲಿಲ್ಲಿ ನಿಂತಿದ್ದರು. ‘ನಿಮ್ಮ ಜಮೀನು ದೋಚಲು ನಾವು ಬಿಡುವುದಿಲ್ಲ. ಕೊನೆ ಕ್ಷಣದವರೆಗೂ ಹೋರಾಡುತ್ತೇವೆ’ ಎಂದು ರಾಹುಲ್‌ ಪ್ರಕಟಿಸಿದರು.

‘ಮೋದಿ ನಿಮ್ಮನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ. ನೀವು ದುರ್ಬಲವಾದ ಬಳಿಕ ನಿಮ್ಮ ಜಮೀನು ಕಿತ್ತು ಉದ್ಯಮಿಗಳಿಗೆ ಕೊಡುತ್ತಾರೆ. ಪದೇ ಪದೇ ಗುಜರಾತ್‌ ಅಭಿವೃದ್ಧಿ ಮಾದರಿ ಕುರಿತು ಮಾತನಾಡುವ ಪ್ರಧಾನಿ ಅಲ್ಲೂ ಮಾಡಿದ್ದು ಇದನ್ನೇ. ಕೃಷಿ ಜಮೀನು ಕಿತ್ತು ಉದ್ಯಮಿಗಳಿಗೆ ಕೊಟ್ಟರು. ಈಗ ತಮ್ಮ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ವಿಸ್ತರಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಯುವರಾಜ ಕಟುವಾಗಿ ಟೀಕಿಸಿದರು.

‘ನಮ್ಮ ಸರ್ಕಾರ ಎರಡು ವರ್ಷದ ಹಿಂದೆ ಜಾರಿಗೊಳಿಸಿದ ಕಾಯ್ದೆ ರೈತರ ಪರವಾಗಿದೆ. ಆದರೆ, ಮೋದಿ ಅವರು ನಿಮಗೆ ಸೂಕ್ತ ಪರಿಹಾರ ಕೊಡದೆ, ನಿಮ್ಮ ಒಪ್ಪಿಗೆಯನ್ನೂ ಪಡೆಯದೆ ಜಮೀನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಅವರು ವಿವರಿಸಿದರು.

‘ರೈತರ ಭೂಮಿಗೆ ಚಿನ್ನದ ಬೆಲೆ ಇದೆ. ಮುಂದಿನ 15–20 ವರ್ಷಗಳಲ್ಲಿ ಜಮೀನಿನ ಬೆಲೆ ಇನ್ನೂ ಏರಲಿದೆ. ನಾವು  ಅಭಿವೃದ್ಧಿ ವಿರೋಧಿಗಳಿಲ್ಲ. ಅಭಿವೃದ್ಧಿಯೂ ಬೇಕು. ರೈತರೂ ಉಳಿಯಬೇಕು. ಕೆಲವರ ಹಿತಾಸಕ್ತಿಗೆ ಉಳಿದವರು ಬಲಿಯಾಗಬಾರದು’ ಎಂದು ರಾಹುಲ್‌ ಅಭಿಪ್ರಾಯಪಟ್ಟರು.

ಒಡಿಶಾ ನಿಯಮಗಿರಿಯಲ್ಲಿ ವೇದಾಂತದ ವಿರುದ್ಧ ಆದಿವಾಸಿಗಳು ನಡೆಸಿದ ಹೋರಾಟವನ್ನು ರಾಹುಲ್‌ ನೆನಪು ಮಾಡಿಕೊಂಡರು. ನಿಯಮಗಿರಿಯಲ್ಲಿ ಉದ್ಯಮ ಸ್ಥಾಪಿಸಲು ಜಮೀನು ಕೊಟ್ಟಿದ್ದರೆ ಅಲ್ಲಿನ ಯುವಕರು ನಕ್ಸಲ್‌ ಚಳವಳಿ ಸೇರುತ್ತಿದ್ದರು ಎಂದರು.

ಎನ್‌ಡಿಎ ಸರ್ಕಾರವನ್ನು ಟೀಕೆ ಮಾಡುವುದರಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಹಿಂದೆ ಬೀಳಲಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಸಿಕ್ಕಿರುವ ರೈತರನ್ನು ಇನ್ನಷ್ಟು ಸಮಸ್ಯೆಗೆ ತಳ್ಳಲಾಗುತ್ತಿದೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಕೈಹಾಕುವ ಮೂಲಕ ಉರಿಯುವ ಗಾಯಕ್ಕೆ ಉಪ್ಪು ಸುರಿದಿದೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ಮಾತು ಹಾಗೂ ನಡವಳಿಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಅವರು ಹೇಳುವುದು ಒಂದು. ಮಾಡುವುದು ಇನ್ನೊಂದಾಗಿದೆ. ಕೃಷಿ ಉತ್ಪನ್ನಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಏರಿಸಲಾಗಿದೆ. ಆದರೆ, ಬೆಳೆಗಳಿಗೆ ಕೊಡುತ್ತಿದ್ದ ಬೋನಸ್‌ ಹಿಂದಕ್ಕೆ ಪಡೆಯಲಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ  ಹೇಳಿದರು.

ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕುರಿತು ಪ್ರಸ್ತಾಪಿಸಿದ ಸೋನಿಯಾ, ದೇಶದಲ್ಲಿ ಯಾವುದೇ ರೈತರ ಆತ್ಮಹತ್ಯೆಗೆ ಅವಕಾಶ ಕೊಡುವುದಿಲ್ಲ ಎಂದು ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಭಾಷಣ ಮಾಡಿದವರೀಗ ಎಲ್ಲಿಗೆ ಹೋಗಿದ್ದಾರೆ. ಸಾಲದ ಹೊರೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಖಾರವಾಗಿ ಕೇಳಿದರು.

ರೈತ ಪರ ಸರ್ಕಾರ: ಮೋದಿ
ಕೇಂದ್ರ ಎನ್‌ಡಿಎ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿದೆ ಎಂಬ ವಿರೋಧಿಗಳ ಆರೋಪವನ್ನು  ಸಾರಾಸಗಟಾಗಿ ತಳ್ಳಿ ಹಾಕಿರುವ ಪ್ರಧಾನಿ ಮೋದಿ,  ತಮ್ಮದು ಬಡವರು ಮತ್ತು ರೈತರ ಪರವಾದ ಸರ್ಕಾರ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.