ADVERTISEMENT

ಮೋದಿ ವಿರುದ್ಧ ಎಫ್‌ಐಆರ್‌

ಮತಗಟ್ಟೆ ಹೊರಗೆ ಪಕ್ಷದ ಚಿಹ್ನೆ ಪ್ರದರ್ಶನದ ವಿವಾದ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2014, 19:30 IST
Last Updated 30 ಏಪ್ರಿಲ್ 2014, 19:30 IST

ಅಹಮದಾಬಾದ್‌/ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದ  ಮತಗಟ್ಟೆಯೊಂದರಲ್ಲಿ ಬುಧವಾರ ಮತ ಚಲಾಯಿಸಿದ ನಂತರ ಪಕ್ಷದ ಚಿಹ್ನೆ ಪ್ರದರ್ಶಿಸಿ, ಮತಗಟ್ಟೆ ಹೊರಗೆ ಸುದ್ದಿಗಾರರೊಂದಿಗೆ ಮಾತನಾ­ಡಿ­ರುವುದು ವಿವಾದದ ದೊಡ್ಡ ಅಲೆ­ಯನ್ನೇ ಎಬ್ಬಿಸಿದೆ. ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಜೊತೆಗೆ ಮತಗಟ್ಟೆ ಹೊರಗೆ ನಡೆದ ಸುದ್ದಿಗೋಷ್ಠಿಯನ್ನು ಪ್ರಸಾರ ಮಾಡಿದ ಸುದ್ದಿ ವಾಹಿನಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.
ಗುಜರಾತ್‌ ಮುಖ್ಯಮಂತ್ರಿ ಅವರ ವಿರುದ್ಧದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧದ ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾ­ವಣಾ ಆಯೋಗವು, ‘ಗುಜರಾತ್‌ನ ಎಲ್ಲಾ ಕ್ಷೇತ್ರಗಳಲ್ಲೂ ಮತ್ತು ದೇಶದ ವಿವಿಧೆಡೆ ಮತದಾನ ನಡೆಯುತ್ತಿರುವ ಹೊತ್ತಿ­ನಲ್ಲೇ ಮತಗಟ್ಟೆಯ ಹೊರಗೆ ಸುದ್ದಿಗೋಷ್ಠಿ ನಡೆಸಿ; ಪಕ್ಷದ ಚಿಹ್ನೆ ಪ್ರದರ್ಶಿಸಿದ್ದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ’ ಎಂದು ಹೇಳಿದೆ.

ಈ ವಿಚಾರ ತಿಳಿದ ತಕ್ಷಣ ಚುನಾವ ಣಾ ಆಯೋಗದ ಮಹಾ­ನಿರ್ದೇಶಕ ಅಕ್ಷಯ್‌ ರಾವತ್‌ ಅವರು, ಮೋದಿ ವಿರುದ್ಧ ಮತ್ತು ಈ ಪ್ರಕರಣದಲ್ಲಿ ಭಾಗಿಯಾದ ಇತರರ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಹಾಗೂ   ಈ ಆದೇಶ ಪಾಲನೆ ಆಗಿರುವ ಬಗ್ಗೆ ಬುಧವಾರ ಸಂಜೆ ಆರು ಗಂಟೆಯೊಳಗೆ ವರದಿ ನೀಡುವಂತೆ ಗುಜರಾತ್‌ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದರು.

ಆಯೋಗದ ನಿರ್ದೇಶನದಂತೆ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದು ಅಹಮದಾಬಾದ್‌ ಪೊಲೀಸ್ ಕಮಿಷ­ನರ್‌ ಶಿವಾನಂದ್‌ ಝಾ  ತಿಳಿಸಿದ್ದಾರೆ.

ಆಯೋಗಕ್ಕೆ ದೂರು: ಇದಕ್ಕೂ ಮೊದಲು, ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷ  ಮೋದಿ ವಿರುದ್ಧ ಚುನಾ­ವಣಾ ಆಯೋಗಕ್ಕೆ ದೂರು ನೀಡಿದ್ದವು. ಇದಕ್ಕೆ ಶೀಘ್ರವಾಗಿ ಸ್ಪಂದಿ­ಸಿದ ಆಯೋಗ, ಕ್ಷೇತ್ರದ ಚುನಾವ­ಣಾ­ಧಿ­­ಕಾರಿಗೆ ವರದಿ ನೀಡುವಂತೆ ಸೂಚಿಸಿತ್ತು.

ಹಿನ್ನೆಲೆ: ಗಾಂಧಿನಗರ ಲೋಕಸಭಾ ಕ್ಷೇತ್ರದ ರಾಣಿಪ್‌ ಮತಗಟ್ಟೆಗೆ ಬಂದ ಮೋದಿ, ಮತ ಚಲಾಯಿಸುವಾಗ ತಮ್ಮ ಮೊಬೈಲ್‌ನಿಂದ ತಮ್ಮದೇ (ಸೆಲ್ಫಿ) ಛಾಯಾಚಿತ್ರ ತೆಗೆದು­-ಕೊಂ­ಡರು. ಪಕ್ಷದ ಚಿಹ್ನೆಯನ್ನು (ಕಮಲದ ಹೂವು) ಎದ್ದು ಕಾಣುವಂತೆ ತೋರಿಸಿದರು.

ರಾಜಕೀಯ ಪಕ್ಷಗಳ ಉನ್ನತ ಸಾಲಿನ ಮುಖಂಡರು ಮತ ಚಲಾಯಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸಾಮಾನ್ಯವಾದರೂ, ಮೋದಿ ಅವರು ಔಪಚಾರಿಕವಾಗಿಯೇ ಸುದ್ದಿಗೋಷ್ಠಿ ನಡೆಸಿದರು. ಮಾತ್ರವಲ್ಲದೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದು, ಆ ಪಕ್ಷದ ಮುಖಂಡರನ್ನು ಕೆರಳಿಸಿತು.

ಬಂಧನಕ್ಕೆ ಒತ್ತಾಯ: ನೀತಿ ಸಂಹಿತೆ ಉಲ್ಲಂಘಿಸಿರುವ ಮೋದಿ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತೇವೆ ಎಂದ ಗುಜರಾತ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅರ್ಜುನ್‌ ಮೋಧ್ವಾಡಿಯಾ,  ‘ಮೋದಿ ಏಜೆಂಟರಂತೆ ವರ್ತಿಸುತ್ತಿರುವ  ರಾಜ್ಯದ ಅಧಿಕಾರಿಗಳ ಮೇಲೆ  ಹಿಡಿತ ಸಾಧಿಸಲು ಚುನಾವಣಾ ಆಯೋಗ ವಿಫಲವಾಗಿದೆ’ ಎಂದರು.

‘ಮೋದಿ ಅವರ ಈ ನಡವಳಿಕೆಯು ಪ್ರಜಾಪ್ರತಿನಿಧಿ ಕಾಯ್ದೆ 126ನೇ ಕಲಂನ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ಅವರ ಉಮೇದು­ವಾರಿಕೆ­ಯನ್ನೇ ಅನರ್ಹ­ಗೊಳಿಸಬೇಕು’ ಎಂದು ಮೋದಿ ವಿರುದ್ಧ ಆಯೋಗಕ್ಕೆ ದೂರು ನೀಡಿರುವ ಎಐಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಕೆ.ಸಿ.ಮಿತ್ತಲ್‌ ಆಗ್ರಹಿಸಿದರು.

ಬಿಜೆಪಿ ಸ್ಪಷ್ಟನೆೆ: ಮೋದಿ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ವಾಗ್ದಾಳಿಗೆ ಪ್ರತಿಕ್ರಿಯಿ­ಸಿರುವ ಬಿಜೆಪಿ, ಅವರು ನೀತಿ ಸಂಹಿತೆ ಉಲ್ಲಂಘಿಸಿಲ್ಲ. ಅದು ಪೂರ್ವ ಯೋಜಿತ  ಸುದ್ದಿಗೋಷ್ಠಿ­-ಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಸಾಂವಿಧಾನಿಕ ಸಂಸ್ಥೆಯಾದ ಚುನಾ­ವಣಾ ಆಯೋಗದ ಬಗ್ಗೆ ಅಪಾರ ಗೌರವ ಇದೆ. ಅದರ ನಿರ್ಧಾರಕ್ಕೆ ಬದ್ಧರಾಗುತ್ತೇವೆ’ ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದರು.

ಈ ವಿವಾದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ಮುಖಂಡ ಅರುಣ್‌ ಜೇಟ್ಲಿ, ‘ಮೋದಿ ಅವರಿಗೆ ಮತಗಟ್ಟೆ ಹೊರಗೆ ಪ್ರಶ್ನೆಗಳನ್ನು ಕೇಳಿದ ಸುದ್ದಿ ವಾಹಿನಿಗಳ ವಿರುದ್ಧವೂ ಆಯೋಗ ಎಫ್‌ಐಆರ್‌ ದಾಖಲಿಸಲು ಸೂಚಿಸಿದೆ. ಹಾಗಾಗಿ ಈ ವಿವಾದದಲ್ಲಿ ಕಾನೂನಿನ ಬದ್ಧತೆಯೇ ಪ್ರಶ್ನಾರ್ಹವಾಗಿದೆ’ ಎಂದರು.

ಪ್ರಾಥಮಿಕ ವರದಿ ಸಲ್ಲಿಕೆ
ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮತಗಟ್ಟೆಯಲ್ಲಿನ ವಿವಾದ ಕುರಿತಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಅಹಮದಾಬಾದ್‌ ಜಿಲ್ಲಾಧಿಕಾರಿಯೂ ಆದ ಗಾಂಧಿನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರೂಪ್‌ವಂತ್‌ ಸಿಂಗ್ ಅವರು ಬುಧವಾರವೇ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಘಟನೆ ಕುರಿತ ದೃಶ್ಯಾವಳಿಯನ್ನು ನಂತರದಲ್ಲಿ ಸಲ್ಲಿಸುವುದಾಗಿ ಹೇಳಿದ್ದಾರೆ.

ADVERTISEMENT

ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯ ಒಳಗೆ ಅಭ್ಯರ್ಥಿಗಳು  ಚುನಾವಣಾ ಪ್ರಚಾರ ಮಾಡಿದರೆ  ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಬಹುದು ಎಂದಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.