ADVERTISEMENT

ಯಾಕೂಬ್‌ ಮೆಮನ್‌ ಗಲ್ಲು ಜಾರಿಗೆ ತಡೆ

1993ರ ಮುಂಬೈ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಜೂನ್ 2014, 19:30 IST
Last Updated 2 ಜೂನ್ 2014, 19:30 IST

ನವದೆಹಲಿ (ಪಿಟಿಐ): ವಾಣಿಜ್ಯ ನಗರಿ ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರ ಯಾಕೂಬ್‌ ಅಬ್ದುಲ್‌ ರಜಾಕ್‌ ಮೆಮನ್‌ಗೆ ವಿಧಿಸಿರುವ ಮರಣ ದಂಡನೆ ಜಾರಿಗೆ  ಸುಪ್ರೀಂಕೋರ್ಟ್‌ ಸೋಮವಾರ ತಡೆ ನೀಡಿದೆ.

‘ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣಗಳಲ್ಲಿ ಪುನರ್‌ಪರಿಶೀಲನಾ ಅರ್ಜಿಗಳನ್ನು   ನ್ಯಾಯಮೂರ್ತಿಗಳ ಕೊಠಡಿಯಲ್ಲಿ ವಿಚಾರಣೆ ಮಾಡಬಾರದು. ಬಹಿರಂಗವಾಗಿ ಇತ್ಯರ್ಥಪಡಿಸಬೇಕು’ ಎಂದು ಮೆಮನ್‌ ಸಲ್ಲಿಸಿದ್ದ ಮನವಿಯನ್ನು ಕೋರ್ಟ್‌್ ಸಂವಿಧಾನ ಪೀಠದ ಮುಂದಿಟ್ಟಿದೆ.

ಮೆಮನ್‌ ಮನವಿಗೆ ಉತ್ತರಿಸುವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ ಇತರರಿಗೆ ನ್ಯಾಯಮೂರ್ತಿಗಳಾದ ಜೆ.ಎಸ್‌.­ಖೇಹರ್‌್ ಹಾಗೂ ಸಿ.ನಾಗಪ್ಪನ್‌ ಅವರಿದ್ದ ಪೀಠ ನೋಟಿಸ್‌ ನೀಡಿದೆ.

‘2000ರ ಡಿಸೆಂಬರ್‌ನಲ್ಲಿ ಕೆಂಪು ಕೋಟೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಮೊಹ­ಮ್ಮದ್‌ ಆರಿಫ್‌ ಸುಪ್ರೀಂಕೋರ್ಟ್‌ಗೆ ಪುನರ್‌­ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಇದನ್ನು ಕೂಡ ಸಂವಿಧಾನಪೀಠದ ಮುಂದೆ ಇಡಲಾಗಿತ್ತು’ ಎಂದು ಮೆಮನ್‌ ಪರ ವಕೀಲ ಉಪಮನ್ಯು ಹಜಾರಿಕ ಹೇಳಿದರು. ಆರಿಫ್‌ ಹಾಗೂ ಮೆಮನ್‌ ಅರ್ಜಿಗ­ಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ಮಾಡಲಾಗುತ್ತದೆ ಎಂದೂ ಕೋರ್ಟ್‌ ತಿಳಿಸಿದೆ.

ಪಿ.ಸದಾಶಿವಂ ಹಾಗೂ ಬಿ.ಎಸ್‌.ಚೌಹಾಣ್‌ ಅವರಿದ್ದ ಪೀಠ   ಮಾರ್ಚ್‌ 21ರಂದು ಮೆಮನ್‌ ಗಲ್ಲು ಶಿಕ್ಷೆಯನ್ನು ಸಮರ್ಥಿಸಿತ್ತು. ಈ ಪ್ರಕರಣದಲ್ಲಿ ಇನ್ನಿತರ ಹತ್ತು ಮಂದಿಗೆ ವಿಶೇಷ ಟಾಡಾ ನ್ಯಾಯಾ­ಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಪೀಠ ಜೀವಾವಧಿಗೆ ಪರಿವರ್ತಿಸಿತ್ತು. ಆರ್‌ಡಿಎಕ್ಸ್‌ ಇಡಲಾಗಿದ್ದ ವಾಹನಗ­ಳನ್ನು ಮುಂಬೈನ ವಿವಿಧ ಕಡೆ ನಿಲ್ಲಿಸಿದ್ದ ಆರೋಪ ಈ ಹತ್ತು ಮಂದಿಯ ಮೇಲಿದೆ.

ಯಾಕೂಬ್‌ ಮೆಮನ್‌ ಯಾರು?: ವೃತ್ತಿಯಲ್ಲಿ ಚಾರ್ಟರ್ಡ್‌ ಅಕೌಂಟಂಟ್‌ ಆಗಿರುವ ಮೆಮನ್‌ ಭೂಗತ ಪಾತಕಿ ಟೈಗರ್‌್ ಮೆಮನ್‌ನ  ಸಹೋದರ.

ಮುಖ್ಯಾಂಶಗಳು
*ಪುನರ್‌ಪರಿಶೀಲನಾ ಅರ್ಜಿ ಬಹಿರಂಗ ವಿಚಾರಣೆಗೆ ಆಗ್ರಹ
*ಮೆಮನ್‌ ಅರ್ಜಿ ಸಂವಿಧಾನ ಪೀಠದ ಮುಂದೆ
*1993ರ ಸ್ಫೋಟದಲ್ಲಿ  257 ಮಂದಿ ಮೃತಪಟ್ಟಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT