ADVERTISEMENT

ಯುಪಿಎ ಸೂಚನೆ: ನ್ಯಾಯಮೂರ್ತಿ ಅವಧಿ ವಿಸ್ತರಣೆ

ಕಟ್ಜು ಆರೋಪಕ್ಕೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮದ್ರಾಸ್ ಹೈಕೋರ್ಟ್‌ ಹೆಚ್ಚುವರಿ ನ್ಯಾಯ­ಮೂರ್ತಿಯವರ ಸೇವಾ ಅವಧಿ ವಿಸ್ತರಣೆಗೆ ಶಿಫಾರಸು ನೀಡುವ ವಿಷಯ­ವಾಗಿ ನ್ಯಾಯಮೂರ್ತಿಗಳ  ನೇಮಕ ಮಂಡಳಿ ಆರಂಭದಲ್ಲಿ ಸಂದಿಗ್ಧದಲ್ಲಿತ್ತು. ಆದರೆ ನಂತರದಲ್ಲಿ ಯುಪಿಎ ಸರ್ಕಾರದ ಸೂಚನೆ ಮೇರೆಗೆ ಅದು ತನ್ನ ನಿರ್ಧಾರ ಬದಲಿಸಿಕೊಂಡಿತು ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ಅವರು ಮಂಗಳವಾರ ಲೋಕಸಭೆಗೆ ತಿಳಿಸಿದರು.

ನ್ಯಾ.ಕಟ್ಜು ಮಾಡಿದ ಆರೋಪದ ಬಗ್ಗೆ ಸಂಸತ್‌ನ ಉಭಯ ಸದನಗಳಲ್ಲಿ ಎರಡನೇ ದಿನವೂ ಎಐಎಡಿಎಂಕೆ ಸದಸ್ಯರು ಭಾರಿ ಗದ್ದಲ ಎಬ್ಬಿಸಿದರು. 

‘ಆ ಸಮಯದಲ್ಲಿ ಕೇಂದ್ರದಲ್ಲಿದ್ದ ಡಿಎಂಕೆ ಸಚಿವರ ಹೆಸರು ಹೇಳಿ’ ಎಂದು ಕೂಗುತ್ತ ಸದಸ್ಯರು ಸಭಾ­ಧ್ಯಕ್ಷರ ಪೀಠದತ್ತ ನುಗ್ಗಿದರು.
ಎಐಎಡಿಎಂಕೆ ಬೇಡಿಕೆಗೆ ಲೋಕ­ಸಭೆಯಲ್ಲಿ ಉತ್ತರ ನೀಡಿದ ರವಿಶಂಕರ್‌ ಪ್ರಸಾದ್‌, ‘2003ರಲ್ಲಿ ನ್ಯಾಯ­ಮೂರ್ತಿ­­ಗಳ ನೇಮಕಾತಿ ಮಂಡಳಿ ಕೆಲ­ವೊಂದು ಆಕ್ಷೇಪ ಎತ್ತಿತ್ತು. ತನಿಖೆಯೂ ನಡೆದಿತ್ತು. ಕೊನೆಗೆ ಈ ನ್ಯಾಯಮೂರ್ತಿ ಸೇವೆ ವಿಸ್ತರಿಸಬಾರದು ಎಂದು ನಿರ್ಧರಿಸಲಾಗಿತ್ತು’ ಎಂದರು.

ರವಿಶಂಕರ್‌ ಪ್ರಸಾದ್‌ ಹೇಳಿದ್ದು...
‘ನ್ಯಾಯಮೂರ್ತಿ ಅವಧಿ ವಿಸ್ತರಣೆಗೆ  ಯಾಕೆ ಶಿಫಾರಸು ಮಾಡಬಾರದು ಎಂದು   ಯುಪಿಎ ಅವಧಿ­ಯಲ್ಲಿ ಪ್ರಧಾನಿ ಕಚೇರಿಯಿಂದ ಸ್ಪಷ್ಟನೆ ಕೇಳಲಾ­ಗಿತ್ತು. ಯಾವುದೇ ಕಾರಣಕ್ಕೂ ಶಿಫಾ­ರಸು ನೀಡಲು ಸಾಧ್ಯವಿರಲಿಲ್ಲ ಎಂದು ನೇಮಕಾತಿ ಮಂಡಳಿ ಪುನರುಚ್ಚರಿಸಿತ್ತು.

‘ನಂತರ, ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು ನೇಮಕಾತಿ ಮಂಡಳಿಗೆ ಪತ್ರ ಬರೆದಿತ್ತು. ಇದಕ್ಕೆ ಉತ್ತ­ರಿಸಿದ್ದ ಮಂಡಳಿ,   ನ್ಯಾಯ­ಮೂರ್ತಿ ಅವಧಿಯನ್ನು ವಿಸ್ತರಿಸ­ಬ­ಹುದು ಎಂದು  ಶಿಫಾರಸು ಮಾಡಿತ್ತು. ಬಳಿಕ ಆ ವಿಷಯ ಅಲ್ಲಿಗೆ ನಿಂತಿತ್ತು. ಈಗ ಆ ನ್ಯಾಯಮೂರ್ತಿ ಇಲ್ಲ. ನೇಮ­ಕಾತಿ ಮಂಡಳಿಯಲ್ಲಿದ್ದ ನ್ಯಾಯ­ಮೂರ್ತಿ­­ಗಳು ನಿವೃತ್ತರಾಗಿ­ದ್ದಾರೆ’ ಎಂದರು.

ಒಂದು ಹಂತದಲ್ಲಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ನ್ಯಾಯಾಂಗ ಹಾಗೂ ನ್ಯಾಯಮೂರ್ತಿಗಳ ಬಗ್ಗೆ ಸಂಸತ್‌ನಲ್ಲಿ ಚರ್ಚಿಸುವುದಕ್ಕೆ ನಿರ್ಬಂಧವಿದೆ’ ಎನ್ನುವ ಅಂಶವನ್ನು ಪೀಠದ ಗಮನಕ್ಕೆ ತಂದರು. ಕೂಡಲೇ ರವಿಶಂಕರ್‌ ಅವರು,  ‘ನಾನು ಯಾವುದೇ ನ್ಯಾಯಮೂರ್ತಿ ನಡತೆಯ ಬಗ್ಗೆ ಹೇಳಿಕೆ ನೀಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಟ್ಜು ಸಮರ್ಥನೆ...
‘ನಾನು ಈ ಆರೋಪ ಮಾಡಿ­ರುವ ಸಂದ­ರ್ಭದ ಬಗ್ಗೆ ಕೆಲವರು ಆಕ್ಷೇಪ ಎತ್ತಿ­ದ್ದಾರೆ.  ವಿವಿಧ ವಿಷಯಗಳಿಗೆ ಸಂಬಂಧಿಸಿ ಫೇಸ್‌ಬುಕ್‌­ನಲ್ಲಿ ನಾನು ನೀಡಿದ್ದ ಹೇಳಿಕೆಗಳಿಗೆ ಕೆಲವು ತಮಿಳರು ಪ್ರತಿಕ್ರಿಯೆ ನೀಡಿ­ದ್ದರು. ಅದಕ್ಕೆ ಉತ್ತರವಾಗಿ ನಾನು ಮದ್ರಾಸ್‌ ಹೈಕೋರ್ಟ್‌ನಲ್ಲಿ ಮುಖ್ಯ­ನ್ಯಾಯ­ಮೂರ್ತಿಯಾಗಿ ಕಾರ್ಯ­ನಿರ್ವ­­­ಹಿಸಿದ್ದ ಅನುಭವಗಳನ್ನು ಹಂಚಿ­ಕೊಂಡೆ. ಅದರಲ್ಲಿ ಈ ನ್ಯಾಯ­ಮೂರ್ತಿ ನೇಮಕ ವಿವಾದ ಕೂಡ ಒಂದು’ ಎಂದು ಕಟ್ಜು ಸ್ಪಷ್ಟನೆ ನೀಡಿದ್ದಾರೆ.

ಕಟ್ಜು ಮುಂದಿಟ್ಟ ಆರು ಪ್ರಶ್ನೆಗಳು
ನವದೆಹಲಿ (ಪಿಟಿಐ): ಮದ್ರಾಸ್‌ ಹೈಕೋರ್ಟ್‌್ ಹೆಚ್ಚುವರಿ ನ್ಯಾಯ­ಮೂರ್ತಿ ಸೇವಾ ಅವಧಿ ವಿಸ್ತರಣೆಗೆ ಸಂಬಂಧಿಸಿ  ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಟ್ಜು ಅವರು ನ್ಯಾ.ಲಹೋಟಿ ಅವರಿಗೆ ಮಂಗಳವಾರ ಆರು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಹೆಚ್ಚುವರಿ ನ್ಯಾಯಮೂರ್ತಿ ಮೇಲೆ ಭ್ರಷ್ಟಾಚಾರದ ಆರೋಪ ಇದ್ದರೂ,  ಇವರ  ಸೇವಾ ಅವಧಿ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುವಾಗ  ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ  ಆರ್‌.ಸಿ.ಲಹೋಟಿ, ವೈ.ಕೆ.ಸಭರ್‌ವಾಲ್‌್ ಹಾಗೂ ಕೆ.ಜಿ.ಬಾಲಕೃಷ್ಣನ್‌್ ಅವರು ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕಟ್ಜು ಆರೋಪಿಸಿದ್ದರು. ಸುಪ್ರೀಂಕೋರ್ಟ್‌್ ನಿವೃತ್ತ ನ್ಯಾಯ­ಮೂರ್ತಿ ಕಟ್ಜು, ಇದೀಗ ತಮ್ಮ ಬ್ಲಾಗ್‌­ನಲ್ಲಿ ಲಹೋಟಿ ಅವರಿಗೆ ಕೆಲವು ಪ್ರಶ್ನೆಗ­ಳನ್ನು ಕೇಳಿ ವಿವಾದಕ್ಕೆ ಮತ್ತಷ್ಟು ಕಾವು ನೀಡಿದ್ದಾರೆ.

ಪ್ರಶ್ನೆ 1: ಹೆಚ್ಚುವರಿ ನ್ಯಾಯಮೂರ್ತಿ ಕುರಿತು ಗುಪ್ತಚರದಳ ವ್ಯತಿರಿಕ್ತ ವರದಿ ನೀಡಿದ ಮೇಲೆ ನೀವೂ ಸೇರಿದಂತೆ  ನ್ಯಾ.  ಸಭರ್‌ವಾಲ್‌, ರುಮಾಪಾಲ್‌್ ಅವರಿದ್ದ ನ್ಯಾಯಮೂರ್ತಿಗಳ ನೇಮ­ಕಾತಿ ಮಂಡಳಿಯ ಸಭೆ ಕರೆಯಲಿಲ್ಲವೇ?   ಆ ಭ್ರಷ್ಟ ನ್ಯಾಯಮೂರ್ತಿ ಸೇವೆಯನ್ನು ಎರಡು ವರ್ಷಗಳಿಗೆ ವಿಸ್ತರಿಸದಂತೆ ಕೇಂದ್ರಕ್ಕೆ ಶಿಫಾರಸು ಮಾಡಲಿಲ್ಲವೇ?

ಪ್ರಶ್ನೆ2: ಮೂವರು ಸದಸ್ಯರ ನೇಮ­ಕಾತಿ ಮಂಡಳಿಯ  ಶಿಫಾರಸು­ಗಳನ್ನು ಕೇಂದ್ರಕ್ಕೆ ಕಳಿಸಿದ ಬಳಿಕ ನೀವು ಮಂಡ­ಳಿಯ ಇನ್ನಿಬ್ಬರು ಸದಸ್ಯರ ಗಮನಕ್ಕೆ ಬಾರ­ದಂತೆ ‘ಈ ಹೆಚ್ಚುವರಿ ನ್ಯಾಯ­ಮೂರ್ತಿ ಸೇವೆಯನ್ನು ಇನ್ನೊಂದು ವರ್ಷ ವಿಸ್ತರಿಸಿ’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದು ಹೌದೋ, ಅಲ್ಲವೋ?

ಪ್ರಶ್ನೆ 3: ಈ ನ್ಯಾಯಮೂರ್ತಿ ಭ್ರಷ್ಟಾ­ಚಾ­ರ­­ದಲ್ಲಿ ತೊಡಗಿದ್ದರು ಎಂದು ಖಚಿತ­ಪ­ಡಿ­ಸಿದ ಗುಪ್ತಚರ ವರದಿ ನಿಜವೇ ಆಗಿದ್ದಲ್ಲಿ, ನೀವು ಈ ನ್ಯಾಯಮೂರ್ತಿ ಸೇವೆ­ಯನ್ನು ಇನ್ನೊಂದು ವರ್ಷ ವಿಸ್ತರಿಸು­ವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಯಾಕೆ?

ಪ್ರಶ್ನೆ4: ಹೆಚ್ಚುವರಿ ನ್ಯಾಯಮೂರ್ತಿ ಮೇಲೆ ಭ್ರಷ್ಟಾಚಾರದ ಆರೋಪಗಳು ಇವೆ ಎನ್ನುವುದನ್ನು ಉಲ್ಲೇಖಿಸಿ ನಾನೇ ಮೊದಲು ನಿಮಗೆ ಚೆನ್ನೈನಿಂದ ಪತ್ರ ಬರೆದಿದ್ದೆ ಅಲ್ಲವೇ? ದೆಹಲಿಯಲ್ಲಿ  ನಿಮ್ಮನ್ನು ಖುದ್ದಾಗಿ ಭೇಟಿಯಾಗಿ ನ್ಯಾಯ­ಮೂರ್ತಿ ಬಗ್ಗೆ ಗುಪ್ತಚರ ವರದಿ ತರಿಸಿಕೊಳ್ಳುವಂತೆಯೂ ಕೋರಿಕೊಂಡಿದ್ದೆ ಅಲ್ಲವೇ?

ಪ್ರಶ್ನೆ 5: ನನ್ನ ಕೋರಿಕೆಯ ಮೇಲೆ ನೀವು ಆ ನ್ಯಾಯಮೂರ್ತಿ ವಿರುದ್ಧ ರಹಸ್ಯ­ವಾಗಿ ಗುಪ್ತಚರ ದಳದಿಂದ ತನಿಖೆ ನಡೆಸಲು ಆದೇಶ ಕೊಟ್ಟಿದ್ದಿರಿ. ಇದು ಹೌದೋ, ಅಲ್ಲವೋ?

ಪ್ರಶ್ನೆ 6: ನಾನು ನಿಮ್ಮನ್ನು ದೆಹಲಿ­ಯಲ್ಲಿ ಭೇಟಿ ಮಾಡಿ ಚೆನ್ನೈಗೆ ಮರಳಿದ ಬಳಿಕ ನೀವು ನನಗೆ ಕರೆ ಮಾಡಿದ್ದಿರಿ. ‘ಹೆಚ್ಚುವರಿ ನ್ಯಾಯಮೂರ್ತಿ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಗುಪ್ತ­ಚರ ವರದಿ ದೃಢಪಡಿಸಿದೆ’ ಎಂದು ಹೇಳಿದ್ದಿರಿ. ಇದು ನಿಜವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT