ADVERTISEMENT

ಯೋಧರ ದೇಹ ಕತ್ತರಿಸಿದ ಪಾಕ್‌

ಭಾರತದ ಭೂಪ್ರದೇಶಕ್ಕೆ ನುಗ್ಗಿ ಅಮಾನವೀಯ ಕೃತ್ಯ

​ಪ್ರಜಾವಾಣಿ ವಾರ್ತೆ
Published 1 ಮೇ 2017, 20:24 IST
Last Updated 1 ಮೇ 2017, 20:24 IST
ಪ್ರೇಮ್‌ಸಾಗರ್‌ - ಪರಮ್‌ಜಿತ್‌
ಪ್ರೇಮ್‌ಸಾಗರ್‌ - ಪರಮ್‌ಜಿತ್‌   

ನವದೆಹಲಿ: ಭಾರತದ ಭೂಪ್ರದೇಶಕ್ಕೆ ನುಗ್ಗಿ ಅಪ್ರಚೋದಿತ ದಾಳಿ ನಡೆಸಿರುವ ಪಾಕಿಸ್ತಾನ ಸೇನೆಯು ಸೋಮವಾರ ಜಮ್ಮುವಿನಲ್ಲಿ ಇಬ್ಬರು ಯೋಧರ ಅಂಗಾಂಗಗಳನ್ನು ಕತ್ತರಿಸಿದೆ. ಇದು ಅನಾಗರಿಕ ಕೃತ್ಯ ಎಂದು ಬಣ್ಣಿಸಿರುವ ಭಾರತದ ಸೇನೆ, ತಕ್ಕ ಉತ್ತರ ನೀಡುವುದಾಗಿ ಶಪಥ ಮಾಡಿದೆ.

ಪೂಂಛ್‌ ಜಿಲ್ಲೆಯ ಕೃಷ್ಣಾ ಘಾಟಿ ಪ್ರದೇಶದಲ್ಲಿ ಬೆಳಗ್ಗಿನ ಗಸ್ತು ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ. 22 ಸಿಖ್‌ ರೆಜಿಮೆಂಟ್‌ನ ಸುಬೇದಾರ್‌ ಪರಮ್‌ಜಿತ್‌ ಸಿಂಗ್‌ ಮತ್ತು ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಪ್ರೇಮ್‌ಸಾಗರ್‌ ಬಲಿಯಾದ ಯೋಧರು. ಮತ್ತೊಬ್ಬ ಯೋಧ ರಾಜೀಂದರ್‌ ಸಿಂಗ್‌ ಅವರಿಗೆ ಗುಂಡಿನ ಗಾಯಗಳಾಗಿವೆ.

ದಾಳಿ ನಡೆಸಿದ ಪಾಕಿಸ್ತಾನ ಸೇನೆಯ ಗಡಿ ರಕ್ಷಣಾ ಪಡೆಯಲ್ಲಿ ಉಗ್ರರು ಕೂಡ ಇದ್ದರೇ ಎಂಬುದು ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಪಾಕಿಸ್ತಾನದ ಗಡಿ ರಕ್ಷಣಾ ಪಡೆಯಲ್ಲಿ ಉಗ್ರರೂ ಇರುತ್ತಾರೆ ಎಂದು ಸೇನೆ  ಮೂಲಗಳು ತಿಳಿಸಿವೆ.

ಪಾಕಿಸ್ತಾನದ ದಾಳಿಗೆ ಭಾರತದ ಸೇನೆ ಸೋಮವಾರ ಬೆಳಗ್ಗಿನಿಂದಲೇ ಪ್ರತಿ ದಾಳಿ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಗುಂಡಿನ ದಾಳಿ ಇನ್ನಷ್ಟು ತೀವ್ರಗೊಳ್ಳಬಹುದು ಎಂದು ಸೇನೆ ತಿಳಿಸಿದೆ. ನಿಯಂತ್ರಣ ರೇಖೆಯಲ್ಲಿರುವ ಎರಡು ಕಾವಲು ಠಾಣೆಗಳ ಮೇಲೆ ಅಪ್ರಚೋದಿತವಾಗಿ ರಾಕೆಟ್‌ ಮತ್ತು ಫಿರಂಗಿ ದಾಳಿ ನಡೆಸಲಾಗಿದೆ. ಅದೇ ಹೊತ್ತಿಗೆ ಗಸ್ತು ತಂಡಗಳ ಮೇಲೆಯೂ ಗುಂಡಿನ ದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ.



ಕೃಷ್ಣಾ ಘಾಟಿ ವಲಯದಲ್ಲಿ ಪಾಕಿಸ್ತಾನದ ಕಾವಲು ಠಾಣೆ ಹೆಚ್ಚು ಅನುಕೂಲಕರ ಸ್ಥಳದಲ್ಲಿದೆ. ಭಾರತದ ಯೋಧರು ಸಾಗುತ್ತಿದ್ದಾಗ ಪಾಕಿಸ್ತಾನದ ಕಡೆಯಿಂದ ರಾಕೆಟ್‌ ಲಾಂಚರ್‌ಗಳು ಮತ್ತು ಫಿರಂಗಿಗಳಿಂದ ದಾಳಿ ನಡೆಸಲಾಗಿದೆ. ತಕ್ಷಣ ಮರಗಳ ಮರೆಯಲ್ಲಿ ಆಶ್ರಯ ಪಡೆದ ಯೋಧರು ಪ್ರತಿ ದಾಳಿ ಆರಂಭಿಸಿದ್ದಾರೆ.

ಯೋಜಿತ ದಾಳಿ: ಉಗ್ರರೂ ಭಾಗಿಯಾಗಿರುವ ಶಂಕೆ
ಅತಿಕ್ರಮಣ ಪ್ರವೇಶ

ಪಾಕಿಸ್ತಾನದ ಗಡಿ ರಕ್ಷಣಾ ಪಡೆ ಸುಮಾರು 250 ಮೀಟರ್‌ನಷ್ಟು ಭಾರತದ ಭೂಪ್ರದೇಶದೊಳಕ್ಕೆ ಬಂದಿದೆ. ಗಸ್ತು ಪಡೆಯ ಕೆಲಸದ ವಿಧಾನವನ್ನು ಕೆಲವು ದಿನಗಳಿಂದ ಗಮನಿಸಿ ಈ ಕೃತ್ಯ ಎಸಗಲಾಗಿದೆ. ಸಂಪೂರ್ಣ ಅಧ್ಯಯನ ನಡೆಸಿ ದಾಳಿಯ ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಇದು ಮೂರನೇ ಕೃತ್ಯ
ಕಳೆದ ಆರು ತಿಂಗಳಲ್ಲಿ ಪಾಕಿಸ್ತಾನ ಸೇನೆ ಭಾರತದ ಯೋಧರ ದೇಹವನ್ನು ಕತ್ತರಿಸಿದ ಮೂರನೇ ಕೃತ್ಯ ಇದು. ಕಳೆದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಇಂತಹದೇ ಕೃತ್ಯವನ್ನು ಪಾಕಿಸ್ತಾನ ಸೇನೆ ಎಸಗಿತ್ತು.

* ಸೋಮವಾರ ಬೆಳಗ್ಗೆ 8.40ಕ್ಕೆ ಯೋಧರ ಮೇಲೆ ದಾಳಿ
* 9 ಯೋಧರ ತಂಡ 700–800 ಮೀಟರ್ ದೂರದಲ್ಲಿದ್ದ ಮತ್ತೊಂದು ಕಾವಲು ಠಾಣೆಗೆ ಸಾಗುತ್ತಿದ್ದಾಗ ಕೃತ್ಯ
* ಪಾಕಿಸ್ತಾನ ಸೇನಾ ಮುಖ್ಯಸ್ಥ ಜಾವೇದ್‌ ಬಾಜ್ವಾ ಅವರು ಗಡಿ ನಿಯಂತ್ರಣ ರೇಖೆಗೆ ಭಾನುವಾರ ಭೇಟಿ ನೀಡಿದ್ದರು. ಅದರ ಮರುದಿನ ದಾಳಿ ನಡೆದಿದೆ
* * *
ಇದು ನೀಚ ಮತ್ತು ಅಮಾನವೀಯ ಕೃತ್ಯ. ಯುದ್ಧದ ಸಂದರ್ಭದಲ್ಲಿ ಕೂಡ ಯಾರೂ ಹೀಗೆ ಮಾಡುವುದಿಲ್ಲ. ಯೋಧರ ತ್ಯಾಗ ವ್ಯರ್ಥವಾಗದು. ಸೇನೆ ತಕ್ಕ ಉತ್ತರ ನೀಡಲಿದೆ.
ಅರುಣ್‌ ಜೇಟ್ಲಿ,
ರಕ್ಷಣಾ ಸಚಿವ
*
ಭಾರತ ಆರೋಪಿಸಿರುವಂತೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿಲ್ಲ. ಯೋಧರ ದೇಹವನ್ನು ಕತ್ತರಿಸಲಾಗಿದೆ ಎಂಬುದೂ ಸುಳ್ಳು.
ಪಾಕಿಸ್ತಾನ ಸೇನೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.