ADVERTISEMENT

ರಕ್ಷಣಾ ವಿಜ್ಞಾನಿಗಳ ಹತ್ಯೆಗೂ ಸಂಚು

ಮತ್ತಷ್ಟು ವಿವರ ಬಹಿರಂಗಪಡಿಸಿದ ಹೆಡ್ಲಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2016, 19:38 IST
Last Updated 9 ಫೆಬ್ರುವರಿ 2016, 19:38 IST
ರಕ್ಷಣಾ ವಿಜ್ಞಾನಿಗಳ ಹತ್ಯೆಗೂ ಸಂಚು
ರಕ್ಷಣಾ ವಿಜ್ಞಾನಿಗಳ ಹತ್ಯೆಗೂ ಸಂಚು   

ಮುಂಬೈ (ಪಿಟಿಐ): ಲಷ್ಕರ್‌ ಎ ತಯಬಾ (ಎಲ್‌ಇಟಿ) ಸಂಘಟನೆ ಮುಂಬೈ ದಾಳಿಗೆ ಒಂದು ವರ್ಷ ಹಿಂದೆ ಭಾರತದ ರಕ್ಷಣಾ ವಿಜ್ಞಾನಿಗಳ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ವಿವರವನ್ನು ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಮಂಗಳವಾರ ಬಹಿರಂಗಪಡಿಸಿದ್ದಾನೆ.

ಅಮೆರಿಕದ ಅಜ್ಞಾತ ಸ್ಥಳದಿಂದ ಸತತ ಎರಡನೇ ದಿನ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ಹೆಡ್ಲಿ, 2008ರ ಮುಂಬೈ ದಾಳಿಯ ಇನ್ನಷ್ಟು ವಿವರಗಳನ್ನು ಹೊರಹಾಕಿದ್ದಾನೆ. ವಿಚಾರಣೆ ಬುಧವಾರವೂ ಮುಂದುವರಿಯಲಿದೆ.

‘2007ರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಮುಜಫ್ಫರಾಬಾದ್‌ನಲ್ಲಿ ಎಲ್‌ಇಟಿಯ ಸಭೆ ನಡೆದಿತ್ತು. ಇಬ್ಬರು ಮುಖಂಡರಾದ ಸಾಜಿದ್‌ ಮೀರ್‌ ಮತ್ತು ಅಬು ಕಹಫ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸಬೇಕೆಂಬ ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿತ್ತು’ ಎಂದು ಹೇಳಿಕೆ ನೀಡಿದ್ದಾನೆ.

‘ತಾಜ್‌ ಹೋಟೆಲ್‌ಗೆ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸುವ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತು. ಹೋಟೆಲ್‌ನ ಕಾನ್ಫರೆನ್ಸ್‌ ಹಾಲ್‌ನಲ್ಲಿ ಭಾರತದ ರಕ್ಷಣಾ ವಿಜ್ಞಾನಿಗಳ ಸಭೆ ನಡೆಯಲಿದೆ ಎಂಬ ಮಾಹಿತಿ ಮೀರ್‌ ಮತ್ತು ಕಹಫ್‌ಗೆ ದೊರೆತಿತ್ತು. ಆ ಸಮಯದಲ್ಲಿ ಹೋಟೆಲ್‌ ಮೇಲೆ ದಾಳಿ ನಡೆಸುವುದು ಅವರ ಯೋಜನೆಯಾಗಿತ್ತು.

‘ತಾಜ್‌ ಹೋಟೆಲ್‌ನ ಪ್ರತಿಕೃತಿ ನಿರ್ಮಿಸಿ ದಾಳಿಗೆ ಸಿದ್ಧತೆ ನಡೆಸಲಾಗಿತ್ತು.  ಆದರೆ ಕಾನ್ಫರೆನ್ಸ್‌ ಹಾಲ್‌ಗೆ ಶಸ್ತ್ರಾಸ್ತ್ರಗಳನ್ನು ಒಯ್ಯುವುದು ಕಷ್ಟ ಎಂಬ ಕಾರಣ ಈ ಯೋಜನೆ ಕೈಬಿಡಲಾಗಿತ್ತು. ಅದೇ ರೀತಿ ವಿಜ್ಞಾನಿಗಳ ಸಭೆಯ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿ ನಮಗೆ ಸಿಕ್ಕಿರಲಿಲ್ಲ. ಯೋಜನೆ ಕೈಬಿಡಲು ಅದು ಕೂಡಾ ಒಂದು ಕಾರಣ’  ಎಂದಿದ್ದಾನೆ.

‘ಭಾರತದ ಯಾವ ಭಾಗದಲ್ಲಿ ದಾಳಿ ನಡೆಸಬೇಕು ಎಂಬುದನ್ನು 2007ರ ನವೆಂಬರ್‌ಗೆ ಮುನ್ನ ನಿರ್ಧರಿಸಿರಲಿಲ್ಲ’ ಎಂಬುದನ್ನು ಬಹಿರಂಗಪಡಿಸಿದ್ದಾನೆ.

ಎಲ್ಲ ದಾಳಿಗೆ ಲಷ್ಕರ್ ಹೊಣೆ:
ಭಾರತದಲ್ಲಿ ನಡೆದಿರುವ ಎಲ್ಲ ಭಯೋತ್ಪಾದನಾ ದಾಳಿಗಳಿಗೆ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯೇ ಹೊಣೆ ಎಂದಿರುವ ಹೆಡ್ಲಿ, ‘ದಾಳಿಯ ಎಲ್ಲ ಸೂಚನೆಗಳು ಸಂಘಟನೆಯ ಕಮಾಂಡರ್‌ ಝಕೀವುರ್‌ ರೆಹಮಾನ್‌ ಲಖ್ವಿಯಿಂದ ಬರುತ್ತಿದ್ದವು’ ಎಂದು ಹೇಳಿದ್ದಾನೆ. ಅಮೆರಿಕದ ಅಜ್ಞಾತ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈನ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಿ ಆತ ಈ ಮಾಹಿತಿ ನೀಡಿದ್ದಾನೆ.

‘ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಅಲ್ಲಿನ ಭಯೋತ್ಪಾದನಾ ಸಂಘಟನೆಗಳಿಗೆ ಆರ್ಥಿಕ, ನೈತಿಕ ಮತ್ತು ಸೇನಾ ಬೆಂಬಲ ನೀಡುತ್ತಿದೆ’ ಎಂದು ಹೆಡ್ಲಿ ಹೇಳಿದ್ದಾನೆ.

‘ಎಲ್‌ಇಟಿ, ಜೈಷ್‌ ಎ ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳು ಐಎಸ್‌ಐನ ನೆರವಿನಿಂದ ಕಾರ್ಯಾಚರಿಸುತ್ತಿವೆ’ ಎಂದಿದ್ದಾನೆ.
ಎಲ್‌ಇಟಿ ಕಮಾಂಡರ್‌ ಲಖ್ವಿ ಐಎಸ್‌ಐನ ಬ್ರಿಗೇಡಿಯರ್‌ ರಿಯಾಜ್‌ನ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದ ಎಂಬುದು ತನಗೆ ತಿಳಿದಿತ್ತು ಎಂದಿದ್ದಾನೆ.
‘ನಾನು ಎಲ್‌ಇಟಿಯ ಕಟ್ಟಾ ಬೆಂಬಲಿಗ’ ಎಂದು ಹೆಡ್ಲಿ ಸೋಮವಾರ ತಿಳಿಸಿದ್ದ. ನ್ಯಾಯಾಧೀಶರು ಮಂಗಳವಾರ ಆತನಿಗೆ ಲಖ್ವಿಯ ಫೋಟೊ ತೋರಿಸಿದಾಗ ಅತನನ್ನು ಗುರುತಿಸಿದ್ದಾನೆ.

ಸಿದ್ಧಿವಿನಾಯಕ ದೇವಾಲಯ ಪರಿಶೀಲನೆ: 2008ರ ದಾಳಿಗೆ ಮುನ್ನ ಮುಂಬೈಗೆ ನೀಡಿದ್ದ ಭೇಟಿಯ ವಿವರಗಳನ್ನು ಉಗ್ರ ಡೇವಿಡ್‌ ಹೆಡ್ಲಿ, ಮುಂಬೈನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

‘2006ರಲ್ಲಿ ಮೊದಲ ಭೇಟಿಯ ವೇಳೆ ಹಲವು ಸ್ಥಳಗಳ ವಿಡಿಯೊ ಚಿತ್ರೀಕರಣ ಮಾಡಿದ್ದೆ. ಆದರೆ ದಾಳಿಯ ಗುರಿಗಳ ಬಗ್ಗೆ ಆಗ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ’ ಎಂದು ತಿಳಿಸಿದ್ದಾನೆ.

‘2008 ರಲ್ಲಿ ಮಂಬೈಗೆ ಬಂದಿದ್ದಾಗ ತಾಜ್‌ ಹೋಟೆಲ್‌, ನೌಕಾ ವಾಯು ನೆಲೆ, ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜ್ಯ ಪೊಲೀಸ್‌ ಕೇಂದ್ರ ಕಚೇರಿಯ ವಿಡಿಯೊ ಚಿತ್ರೀಕರಣ ಮಾಡಿದ್ದೆ. ಅದೇ ರೀತಿ ಉಗ್ರರು ಪ್ರವೇಶಿಸಬೇಕಾದ ಜಾಗಗಳನ್ನು ಗುರುತಿಸಿದ್ದೆ.

‘ಕೊಲಾಬಾದ ಲಿಯೊಪೋಲ್ಡ್‌ ಕೆಫೆಯಿಂದ ನಾರಿಮನ್‌ ಹೌಸ್‌ವರೆಗಿನ ಹಾದಿಯುದ್ದಕ್ಕೂ ವಿಡಿಯೊ ಚಿತ್ರೀಕರಣ ಮಾಡಿದ್ದೆ. ಸಾಜಿದ್‌ ಮೀರ್‌ನ ವಿಶೇಷ ಸೂಚನೆಯಂತೆ ಸಿದ್ಧಿವಿನಾಯಕ ದೇವಾಲಯದ ವಿಡಿಯೊ ಕೂಡಾ ಮಾಡಿದ್ದೆ.

‘ಮುಂಬೈ ಭೇಟಿಯ ವೇಳೆ ಜಿಪಿಎಸ್‌ ಸಾಧನ ಬಳಸಿದ್ದೆ. ಪಾಕಿಸ್ತಾನಕ್ಕೆ ಮರಳಿದ ಬಳಿಕ ಎಲ್ಲ ಫೋಟೊ, ವಿಡಿಯೊ ಮತ್ತು ಜಿಪಿಎಸ್‌ಅನ್ನು ಸಾಜಿದ್ ಮೀರ್‌ ಮತ್ತು ಅಬು ಕಹಫ್‌ಗೆ ಒಪ್ಪಿಸಿದ್ದೆ’  ಎಂದು ನ್ಯಾಯಾಧೀಶ ಜಿ.ಎ. ಸನಪ್‌ ಮತ್ತು ವಿಶೇಷ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಂಗೆ ತಿಳಿಸಿದ್ದಾನೆ.

‘ಎಲ್‌ಇಟಿಯನ್ನು ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಿದ ಅಮೆರಿಕ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆ ಎಲ್‌ಇಟಿ ನಾಯಕರಾದ ಹಫೀಜ್‌ ಮತ್ತು ಲಖ್ವಿ ಜತೆ ಚರ್ಚಿಸಿದ್ದೆ. ಆದರೆ ಇದು ಸುದೀರ್ಘ ಪ್ರಕ್ರಿಯೆ ಎಂಬ ಕಾರಣ ಕಾನೂನು ಹೋರಾಟಕ್ಕೆ ಮುಂದಾಗಲಿಲ್ಲ’ ಎಂದಿದ್ದಾನೆ.

ಮಸೂದ್ ಅಜರ್‌ ಗೊತ್ತು: ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನನ್ನು ನೋಡಿದ್ದಾಗಿ ಹೆಡ್ಲಿ ತಿಳಿಸಿದ್ದಾನೆ.
‘ನನಗೆ ಮಸೂದ್‌ ಅಜರ್‌ ಗೊತ್ತು. 2003 ರ ಅಕ್ಟೋಬರ್‌ನಲ್ಲಿ ಅವರನ್ನು ನೋಡಿದ್ದೆ. ಎಲ್‌ಇಟಿ ಸಂಘಟನೆಯ ಸಭೆಯೊಂದರಲ್ಲಿ ಭಾಷಣ ಮಾಡಲು ಬಂದಿದ್ದರು’ ಎಂದು ನುಡಿದಿದ್ದಾನೆ.

ಗೂಢಚಾರನ ನೇಮಿಸುವ ಹೊಣೆ: ಭಾರತದ ಸೈನಿಕನೊಬ್ಬನನ್ನು ಐಎಸ್‌ಐ ಪರ ಗೂಢಚರ್ಯೆ ನಡೆಸುವ ಕೆಲಸಕ್ಕೆ ನೇಮಿಸುವ ಹೊಣೆಯನ್ನೂ ನನಗೆ ವಹಿಸಲಾಗಿತ್ತು ಎಂದು ಹೆಡ್ಲಿ ತಿಳಿಸಿದ್ದಾನೆ.

‘ಐಎಸ್‌ಐನ ಮೇಜರ್‌ ಇಕ್ಬಾಲ್‌ನನ್ನು 2006ರಲ್ಲಿ ಲಾಹೋರ್‌ನಲ್ಲಿ ಭೇಟಿಯಾಗಿದ್ದೆ. ಭಾರತದ ಸೇನೆಯಿಂದ ಯಾರಾದರೊಬ್ಬರನ್ನು ಐಎಸ್‌ಐ ಪರ ಗೂಢಚರ್ಯೆ ನಡೆಸುವ ಕೆಲಸಕ್ಕೆ ನೇಮಿಸಬೇಕು ಎಂದು ಅವರು ಕೋರಿದ್ದರು’ ಎಂದು ವಿವರಿಸಿದ್ದಾನೆ.

ಪತ್ನಿ ದೂರು ನೀಡಿದ್ದಳು: ‘ಪತ್ನಿ ಫಾಯಿಜಾ ನನ್ನ ವಿರುದ್ಧ ಎರಡು ಸಲ ದೂರು ನೀಡಿದ್ದಳು’ ಎಂಬ ಮಾಹಿತಿಯನ್ನು ಹೆಡ್ಲಿ ನೀಡಿದ್ದಾನೆ.

‘ಫಾಯಿಜಾ 2007ರ ಡಿಸೆಂಬರ್‌ನಲ್ಲಿ ಲಾಹೋರ್‌ನ ರೇಸ್‌ಕೋರ್ಸ್‌ ರಸ್ತೆ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ವಂಚನೆ ಆರೋಪ ಹೊರಿಸಿ ದೂರು ನೀಡಿದ್ದಳು.

‘ನಾನು ಎಲ್‌ಇಟಿ ಸಂಘಟನೆ ಮೂಲಕ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದೇನೆ ಎಂದು 2008ರ ಜನವರಿಯಲ್ಲಿ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ದೂರು ನೀಡಿದ್ದಳು’ ಎಂದು ಹೇಳಿದ್ದಾನೆ.

ಉಗ್ರ ಹೇಳಿದ್ದು...
* ಎಲ್‌ಇಟಿ, ಜೈಷ್‌ ಎ ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳಿಗೆ ಐಎಸ್‌ಐನಿಂದ ಹಣ

ADVERTISEMENT

* ಯುನೈಟೆಡ್‌ ಜಿಹಾದ್‌ ಕೌನ್ಸಿಲ್‌ ಎಂಬ ಹೆಸರಿನಲ್ಲಿ ಈ ಮೂರು ಸಂಘಟನೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ

* ಐಎಸ್ಐ ಪರವಾಗಿಯೂ ಕೆಲಸ ಮಾಡುತ್ತಿದ್ದೆ. ಪಾಕ್‌ ಸೇನೆಯ ಹಲವು ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ

* ಪತ್ನಿ ಫಾಯಿಜಾ ಜತೆ ತಾಜ್‌ ಹೋಟೆಲ್‌ನಲ್ಲಿ ತಂಗಿದ್ದಾಗ ಎರಡನೇ ಮಹಡಿಯ ವಿಡಿಯೊ ಚಿತ್ರೀಕರಣ

* ಭಾರತದ ಸೈನಿಕನನ್ನು ಐಎಸ್‌ಐ ಪರ ಗೂಢಚರ್ಯೆ ಕೆಲಸಕ್ಕೆ ನೇಮಿಸುವ ಹೊಣೆ ನೀಡಲಾಗಿತ್ತು

* 2003 ರಲ್ಲಿ ಮಸೂದ್‌ ಅಜರ್‌ನನ್ನು  ನೋಡಿದ್ದೆ

* ಸಾಜಿದ್‌ ಮೀರ್‌ ಸೂಚನೆಯಂತೆ ಮುಂಬೈನ ಸಿದ್ಧಿವಿನಾಯಕ ದೇವಾಲಯದ ವಿಡಿಯೊ ಚಿತ್ರೀಕರಣ

* ಭಾರತದಲ್ಲಿ ನಡೆದ ಎಲ್ಲ ಭಯೋತ್ಪಾದಕ ದಾಳಿಗಳಿಗೆ ಎಲ್‌ಇಟಿ ಹೊಣೆ

ತನಿಖೆಗೆ ನೆರವು: ಅಮೆರಿಕ ಭರವಸೆ (ವಾಷಿಂಗ್ಟನ್‌ ವರದಿ): ಮತ್ತೊಂದೆಡೆ, 2008ರ ಮುಂಬೈ ಮೇಲಿನ ದಾಳಿಯ ಸಂಚುಕೋರರನ್ನು ಶಿಕ್ಷಿಸಲು ಭಾರತಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಅಮೆರಿಕ ಹೇಳಿದೆ.

‘ದಾಳಿಗೆ ಕಾರಣರಾದವರನ್ನು ಶಿಕ್ಷಿಸಲು ಭಾರತವು ಪ್ರಯತ್ನಿಸುತ್ತಾ ಇದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರಕ್ಕೆ ನಮ್ಮಿಂದ ಸಾಧ್ಯವಾದ ಎಲ್ಲ ರೀತಿಯ ಸಹಾಯ ಮಾಡಲು ಬದ್ಧರಾಗಿದ್ದೇವೆ’ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಜಾನ್‌ ಕಿರ್ಬಿ ತಿಳಿಸಿದ್ದಾರೆ.

ಮುಂಬೈ ಮೇಲಿನ ದಾಳಿಗೆ ಪಾಕಿಸ್ತಾನದ ಉಗ್ರರು ಕಾರಣ ಎಂದು ಹೆಡ್ಲಿ ಅವರು ತಪ್ಪೊಪ್ಪಿಕೊಂಡ ಬೆನ್ನಲ್ಲೇ ಕಿರ್ಬಿ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.