ADVERTISEMENT

ರಸ್ತೆ ಗುಂಡಿಯೇ ಸಾವಿನ ಹಾದಿ: ಬುಲೆಟ್‌ನಲ್ಲಿ ಮಹಿಳೆಯ ಕೊನೆಯ ಪಯಣ

ಏಜೆನ್ಸೀಸ್
Published 24 ಜುಲೈ 2017, 13:56 IST
Last Updated 24 ಜುಲೈ 2017, 13:56 IST
ರಸ್ತೆ ಗುಂಡಿಯೇ ಸಾವಿನ ಹಾದಿ: ಬುಲೆಟ್‌ನಲ್ಲಿ ಮಹಿಳೆಯ ಕೊನೆಯ ಪಯಣ
ರಸ್ತೆ ಗುಂಡಿಯೇ ಸಾವಿನ ಹಾದಿ: ಬುಲೆಟ್‌ನಲ್ಲಿ ಮಹಿಳೆಯ ಕೊನೆಯ ಪಯಣ   

ಮುಂಬೈ: ಭಾನುವಾರ ಬೆಳಿಗ್ಗೆ ಬುಲೆಟ್‌ ಬೈಕ್‌ನಲ್ಲಿ ದೂರದ ಪ್ರಯಾಣ ಹೊರಟಿದ್ದ 36 ವರ್ಷದ ಮಹಿಳೆ ರಸ್ತೆ ಗುಂಡಿಯಿಂದಾಗಿ ಸಾವಿಗೀಡಾಗಿದ್ದಾರೆ.

ಬಾಂದ್ರಾ ನಿವಾಸಿಯಾದ ಗೃಹಿಣಿ ಜಾಗೃತಿ ಹೊಗಳೆ ಜವ್ಹಾರ್‌–ದಹಣು ಹೆದ್ದಾರಿಯಲ್ಲಿ ಚಲಾಯಿಸುತ್ತಿದ್ದ ಬೈಕ್‌ ಗುಂಡಿಗೆ ಇಳಿದು ನಿಯಂತ್ರಣ ಕಳೆದುಕೊಂಡಿದೆ. ರಸ್ತೆಗೆ ಉರುಳಿದ ಜಾಗೃತಿ ಟ್ರಕ್‌ ಅಡಿಗೆ ಸಿಲುಕಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಬೈಕರ್‌ಗಳನ್ನು ಒಳಗೊಂಡ ಬೈಕರ್ನಿ ಬೈಕರ್‌ ಕ್ಲಬ್‌ ಸದಸ್ಯರು ಮುಂಬೈನಿಂದ 115 ಕಿ.ಮೀ. ದೂರದ ದಹಣುಗೆ ಪ್ರಯಾಣ ಬೆಳೆಸಿದ್ದರು. ಜಾಗೃತಿ ಜತೆಗೆ ಇನ್ನೂ ಇಬ್ಬರು ಮಹಿಳಾ ಬೈಕರ್‌ಗಳಿದ್ದರು. ಎಲ್ಲರೂ ಹೆಲ್ಮೆಟ್‌ ಸೇರಿದಂತೆ ಅಗತ್ಯ ಸುರಕ್ಷತಾ ಉಡುಪು ಧರಿಸಿದ್ದರು ಎನ್ನಲಾಗಿದೆ.

ADVERTISEMENT

ರಾಯಲ್‌ ಎನ್‌ಫೀಲ್ಡ್‌ನ ಥಂಡರ್‌ಬರ್ಡ್‌ 350 ಬೈಕ್‌ ಚಲಾಯಿಸುತ್ತಿದ್ದ ಜಾಗೃತಿ ರಸ್ತೆ ಗುಂಡಿಗೆ ಬೈಕ್‌ ಇಳಿಯುತ್ತಿದ್ದಂತೆ ಕೆಳಗೆ ಬಿದ್ದಿದ್ದಾರೆ. ರಸ್ತೆಯಿಂದ ಮೇಲೇಳುವ ಮುನ್ನವೇ ಟ್ರಕ್‌ ಹರಿಯಿತು ಎಂದು ಜತೆಯಲ್ಲಿದ್ದ ಬೈಕರ್‌ಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೂರು ವರ್ಷಗಳಿಂದ ಬೈಕ್‌ ರೈಡ್‌ ಮಾಡುತ್ತಿದ್ದ ಅವರು ಕಳೆದ ವರ್ಷ ಲಡಾಕ್‌ನ ಖರ್ದುಂಗ್‌ ಲಾ ವರೆಗೂ ಪ್ರಯಾಣ ಬೆಳೆಸಿದ್ದರು. ಬೈಕ್‌ ರೈಡ್‌ನೊಂದಿಗೆ ಟ್ರೆಕ್ಕಿಂಗ್‌ ಹಾಗೂ ಮ್ಯಾರಥಾನ್‌ ಓಟದಲ್ಲಿಯೂ ಆಸಕ್ತಿ ಹೊಂದಿದ್ದ ಜಾಗೃತಿ ಪತಿ ಹಾಗೂ ಮಗನನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.