ADVERTISEMENT

ರಸ್ತೆ ಬದಿಯೇ ಮಹಾರಾಷ್ಟ್ರಸಚಿವರ ಮೂತ್ರ ವಿಸರ್ಜನೆ!

ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರಕ್ಕೆ ತೀವ್ರ ಮುಜುಗರ

ಪಿಟಿಐ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ರಾಮ್‌ ಶಿಂಧೆ
ರಾಮ್‌ ಶಿಂಧೆ   

ಮುಂಬೈ: ಮಹಾರಾಷ್ಟ್ರದ ಸಚಿವ ಪ್ರೊ. ರಾಮ್‌ ಶಿಂಧೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ.

ಸೊಲ್ಲಾಪುರ–ಬಾರ್ಶಿ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಶಿಂಧೆ ರಸ್ತೆ ಬದಿಯಲ್ಲಿಯೇ ಮೂತ್ರ ವಿಸರ್ಜಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಬಿಜೆಪಿಯ ಹಿರಿಯ ನಾಯಕ ಮತ್ತು ಪ್ರಭಾವಿ ಸಚಿವರಾಗಿರುವ ಶಿಂಧೆ ‘ಜಲ ಸಂರಕ್ಷಣೆ’ ಹಾಗೂ ‘ಶಿಷ್ಟಾಚಾರ’ದಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

ADVERTISEMENT

ವಿಶ್ವ ಶೌಚಾಲಯ ದಿನಾಚರಣೆಯಂದೇ (ಭಾನುವಾರ) ಈ ಪ್ರಕರಣ ಬೆಳಕಿಗೆ ಬಂದಿರುವುದು ವಿರೋಧ ಪಕ್ಷಗಳಿಗೆ ಲೇವಡಿಯ ವಿಷಯವಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನ ಎಷ್ಟು ಸಫಲವಾಗಿದೆ ನೋಡಿ’ ಎಂದು ವಿರೋಧ ಪಕ್ಷ ಎನ್‌ಸಿಪಿ ಕುಹಕವಾಡಿವೆ.

‘ಹೆದ್ದಾರಿಯಲ್ಲಿ ಶೌಚಾಲಯ ಕಾಣಲಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ರಸ್ತೆ ಬದಿಯೇ ಮೂತ್ರ ವಿಸರ್ಜನೆ ಮಾಡಬೇಕಾಯಿತು’ ಎಂದು ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವಚ್ಛ ಭಾರತ ಆಂದೋಲನ ಮತ್ತು ಜಲಯುಕ್ತ ಶಿವರ್ ಯೋಜನೆ ಪರಿಶೀಲನೆಗೆ ತಿಂಗಳಿನಿಂದ ಬಿಡುವಿಲ್ಲದೆ ಪ್ರವಾಸ ಮಾಡುತ್ತಿರುವೆ. ಬಿಸಿಲು, ದೂಳಿನಿಂದಾಗಿ ಆರೋಗ್ಯ ಹದಗೆಟ್ಟಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಎಲ್ಲಿದೆ ಸ್ವಚ್ಛ ಭಾರತ: ಎನ್‌ಸಿಪಿ ಪ್ರಶ್ನೆ
‘ಮಹಾರಾಷ್ಟ್ರದ ಪ್ರಭಾವಿ ಸಚಿವರೊಬ್ಬರಿಗೆ ಹೆದ್ದಾರಿಯಲ್ಲಿ ಮೂತ್ರ ಮಾಡಲು ಒಂದು ಶೌಚಾಲಯ ಸಿಗಲಿಲ್ಲ ಎಂದಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ವಿಫಲವಾಗಿದೆ ಎಂದರ್ಥ’ ಎಂದು ಎನ್‌ಸಿಪಿ ವ್ಯಂಗ್ಯವಾಡಿದೆ.

‘ಪೆಟ್ರೋಲ್‌, ಡೀಸೆಲ್‌ ಮೇಲಿನ ಸ್ವಚ್ಛ ಭಾರತ ಸೆಸ್‌ ಹಣ ಎಲ್ಲಿಗೆ ಹೋಯಿತು? ಕೇಂದ್ರ ಸರ್ಕಾರ ಸ್ವಚ್ಛ ಭಾರತ ಆಂದೋಲನದ ಹೆಸರಲ್ಲಿ ಜನಸಾಮಾನ್ಯರ ಹಣ ಲೂಟಿ ಮಾಡುತ್ತಿದೆ. ಹೆದ್ದಾರಿಯಲ್ಲಿ ಶೌಚಾಲಯ ಇಲ್ಲ ಎಂದು ಖುದ್ದು ಸಚಿವರೇ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು’ ಎಂದು ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಪ್ರಶ್ನಿಸಿದ್ದಾರೆ.

‘ಶಿಸ್ತು, ನೈರ್ಮಲ್ಯದ ಪಾಠ ಹೇಳುವ ಮೋದಿ ಅವರ ಪಕ್ಷದ ನಾಯಕರು ಮತ್ತು ಸಚಿವರೇ ಅದನ್ನು ಪಾಲಿಸುತ್ತಿಲ್ಲ. ಹಾಗಾದರೆ ಅವರು ಹೇಗೆ ಜನರಿಂದ ಶಿಸ್ತನ್ನು ನಿರೀಕ್ಷಿಸುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಶೌಚ, ಮೂತ್ರ ಮಾಡುವ ಬಡ ಮಹಿಳೆಯರಿಗೆ ಹೂವಿನ ಹಾರ ಹಾಕಿ ಅವಮಾನಿಸುವ ಅಧಿಕಾರಿಗಳು ಈಗ ಈ ಸಚಿವರಿಗೂ ಹೂವಿನ ಹಾರ ಹಾಕುವರೇ‘ ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರೆ ಪ್ರೀತಿ ಶರ್ಮಾ ಮೆನನ್‌ ಅವರು ಟ್ವೀಟ್‌ ಮಾಡಿದ್ದಾರೆ.

* ಬಿಜೆಪಿ ಸಚಿವ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಸಂಪೂರ್ಣ ವಿಫಲವಾಗಿದೆ ಎಂಬುವುದನ್ನು ನಿರೂಪಿಸಿದ್ದಾರೆ

– ನವಾಬ್‌ ಮಲಿಕ್‌
  ಎನ್‌ಸಿಪಿ ವಕ್ತಾರ

* ಜ್ವರದಿಂದ ಬಳಲುತ್ತಿದ್ದ ನನಗೆ ಹೆದ್ದಾರಿಯಲ್ಲಿ ತಕ್ಷಣಕ್ಕೆ ಶೌಚಾಲಯ ಕಾಣಲಿಲ್ಲ. ಅನಿವಾರ್ಯವಾಗಿ ರಸ್ತೆ ಬದಿ ಮೂತ್ರ ವಿಸರ್ಜಿಸಬೇಕಾಯಿತು

– ಪ್ರೊ. ರಾಮ್‌ ಶಿಂಧೆ
ಮಹಾರಾಷ್ಟ್ರದ ಜಲ ಸಂರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.