ADVERTISEMENT

ರಾಜ್ಯಪಾಲರಿಗೂ ನೀಡಿಲ್ಲ ಬಿಜೆಪಿ ಬೆಂಬಲಿಗ ಶಾಸಕರ ಪಟ್ಟಿ

ಸರ್ಕಾರ ರಚನೆ ಅವಕಾಶ ಕೋರಿ ಪತ್ರ ಮಾತ್ರ: ಮಾಹಿತಿ ಹಕ್ಕು ಮೂಲಕ ಬಹಿರಂಗ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ಮುಂಬೈ (ಐಎಎನ್‌ಎಸ್‌): ಮಹಾರಾಷ್ಟ್ರದಲ್ಲಿ ಅಲ್ಪಮತದ ಸರ್ಕಾರ ರಚನೆಗೆ ಹಕ್ಕು ಮಂಡಿಸುವಾಗ ಬೆಂಬಲಿಗ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಬಿಜೆಪಿ ಸಲ್ಲಿಸಿರಲಿಲ್ಲ ಎಂಬ ಅಂಶ ಮಾಹಿತಿ ಹಕ್ಕು ಮೂಲಕ ಪಡೆದುಕೊಂಡ ಮಾಹಿತಿಯಲ್ಲಿ ಬಹಿರಂಗವಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್‌ ಗಳಗಲಿ ಅವರು ರಾಜ್ಯಪಾಲರ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಶಾಸಕರ ಮಾಹಿತಿ ಕೋರಿದ್ದರು.

‘ಬಿಜೆಪಿಯ ಹಿರಿಯ ಮುಖಂಡರಾದ ದೇವೇಂದ್ರ ಫಡಣವೀಸ್‌, ಏಕನಾಥರಾವ್‌ ಖಾಡ್ಸೆ ಪಾಟೀಲ್‌, ವಿನೋದ್‌ ತಾವ್ಡೆ, ಸುಧೀರ್‌ ಮುಂಗಂಟಿವರ್‌ ಮತ್ತು ಪಂಕಜಾ ಮುಂಢೆ ಅವರು ಸಹಿ ಮಾಡಿದ ಪತ್ರವನ್ನು ಅ. 28ರಂದು ರಾಜ್ಯಪಾಲರಿಗೆ ನೀಡ­ಲಾಗಿದೆ’ ಎಂದು ರಾಜ್ಯಪಾಲರ ಕಚೇರಿ ಉತ್ತರ ನೀಡಿದೆ.

ಬಿಜೆಪಿಯು ಅತ್ಯಂತ ದೊಡ್ಡ ಪಕ್ಷವಾಗಿರು­ವುದ­ರಿಂದ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂದು ಪತ್ರದಲ್ಲಿ ಕೋರಲಾಗಿತ್ತು ಎಂಬ ಮಾಹಿತಿಯನ್ನೂ ರಾಜ್ಯಪಾಲರ ಕಚೇರಿ ನೀಡಿದೆ ಎಂದು ಅನಿಲ್‌ ವಿವರಿಸಿದ್ದಾರೆ.

ಸರ್ಕಾರ ರಚನೆಯಾದ ನಂತರ, ವಿಶ್ವಾಸಮತ ಪಡೆದುಕೊಳ್ಳಲು ಫಡಣವೀಸ್‌ ಅವರು ಅತ್ಯಂತ ಸುಲಭ ಮತ್ತು ಅಸ್ಪಷ್ಟ ವಿಧಾನವಾದ ಧ್ವನಿಮತ­ವನ್ನೇ ಆಯ್ದುಕೊಂಡರು. ರಾಜ್ಯಪಾಲರಿಗೆ ಬಿಜೆಪಿ ಶಾಸಕರ ಪಟ್ಟಿಯನ್ನಾಗಲಿ ಅಥವಾ ಬೆಂಬಲ ನೀಡುವ ಇತರ ಶಾಸಕರ ಪಟ್ಟಿಯನ್ನಾಗಲಿ ನೀಡಿಲ್ಲ ಎಂಬುದು ಆಘಾತಕಾರಿ ಎಂದು ಅನಿಲ್‌ ಅವರು ಹೇಳಿದ್ದಾರೆ.

ತಮ್ಮ ಬಲವನ್ನು ಬಹಿರಂಗಪಡಿಸದೆ ಮತ್ತು ಬೆಂಬಲಿಗ ಶಾಸಕರ ಪಟ್ಟಿಯನ್ನೂ ನೀಡದೆ ಫಡಣವೀಸ್‌ ಸರ್ಕಾರ ವಿಶ್ವಾಸಮತ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಕ್ಕೆ ಎಷ್ಟು ಶಾಸಕರು ಬೆಂಬಲ ನೀಡುತ್ತಿದ್ದಾರೆ ಎಂಬುದು ಮಹಾರಾಷ್ಟ್ರದ ಜನರಿಗೆ ತಿಳಿದಿಲ್ಲ. ಹಾಗಾಗಿ ವಿಶ್ವಾಸಮತ ಸಂದರ್ಭದಲ್ಲಿ ಎಷ್ಟು ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದರು ಎಂಬ ಪಟ್ಟಿಯನ್ನು ಬಿಡುಗಡೆ ಮಾಡುವುದು ಸರ್ಕಾರದ ನೈತಿಕ ಕರ್ತವ್ಯ ಎಂದು ಅವರು ಅಭಿಪ್ರಾಯ­ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.