ADVERTISEMENT

ರಾಜ್ಯಸಭೆಗೆ ಮಲ್ಯ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ರಾಜ್ಯಸಭೆಗೆ ಮಲ್ಯ ರಾಜೀನಾಮೆ
ರಾಜ್ಯಸಭೆಗೆ ಮಲ್ಯ ರಾಜೀನಾಮೆ   

ನವದೆಹಲಿ: ವಿವಿಧ ಬ್ಯಾಂಕುಗಳಿಗೆ 9,400 ಕೋಟಿ ರೂಪಾಯಿ ಸಾಲ ಮರು ಪಾವತಿಸದೆ ದೇಶ ತೊರೆದಿರುವ ಉದ್ಯಮಿ ವಿಜಯ ಮಲ್ಯ ಅವರು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ನೀತಿ ಸಮಿತಿಯು ರಾಜ್ಯಸಭೆಯಿಂದ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡಲು ಸಿದ್ಧತೆ ನಡೆಸುತ್ತಿದೆ. ಅದನ್ನು ತಪ್ಪಿಸಿಕೊಳ್ಳಲು ಮಲ್ಯ ತಾವಾಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಕರ್ನಾಟಕದಿಂದ ಎರಡು ಬಾರಿ ಪಕ್ಷೇತರರಾಗಿ ರಾಜ್ಯಸಭೆಗೆ ಆಯ್ಕೆ ಯಾಗಿದ್ದ ಮಲ್ಯ ಅವರು, ಬ್ಯಾಂಕ್ ಸಾಲ ಮರುಪಾವತಿ ಮಾಡದಿರಲು ಕಾರಣವೇನು ಎಂಬ ಬಗ್ಗೆ ನೀತಿ ಸಮಿತಿಗೆ ವಿವರಣೆ ನೀಡುವ ಬದಲು ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

ಜೂನ್ 30ಕ್ಕೆ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಮುಗಿಯಲಿದೆ.

ನೀತಿ ಸಮಿತಿ ಸಭೆ ಇಂದು: ಮಲ್ಯ ಅವರು ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರೂ ನೀತಿ ಸಮಿತಿಯು ಮಂಗಳವಾರ ಸಭೆ ಸೇರಿ ಅನೈತಿಕ ವರ್ತನೆ ಮತ್ತು ನೀತಿ ಸಂಹಿತೆ ಉಲ್ಲಂಘನೆಯ ಆಪಾದನೆಯನ್ನು ಪರಿಶೀಲಿಸಲಿದೆ. ರಾಜ್ಯಸಭಾ ಅಧ್ಯಕ್ಷರು ರಾಜೀನಾಮೆ ಯನ್ನು ಇನ್ನೂ ಅಂಗೀಕರಿಸದೆ ಇರುವುದರಿಂದ ಮಲ್ಯ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯುತ್ತಾರೆ. ಹಾಗಾಗಿ ನೀತಿ ಸಮಿತಿ ತನ್ನ ಕೆಲಸ ಮುಂದುವರಿಸುತ್ತದೆ.

ನಿಯಮ ಏನು ಹೇಳುತ್ತದೆ?
ಸದಸ್ಯರ ರಾಜೀನಾಮೆ ಪತ್ರ ಸದನದ ನಿಯಮಗಳಿಗೆ ಅನುಗುಣವಾಗಿದೆ ಎಂದು ಮನವರಿಕೆಯಾದರೆ ಅದನ್ನು ಸಭಾಪತಿಗಳು ಅಂಗೀಕರಿಸಬಹುದು.

ಸದಸ್ಯತ್ವ ತ್ಯಜಿಸುವ ಸದಸ್ಯರು ಸ್ವಹಸ್ತದಲ್ಲಿ ರಾಜೀನಾಮೆ ಪತ್ರ ಬರೆದು, ಸಭಾಪತಿಗೆ ಕಳುಹಿಸಬೇಕು.

ವೈಯಕ್ತಿಕವಾಗಿ, ಪ್ರತಿನಿಧಿ ಅಥವಾ ಅಂಚೆ ಮೂಲಕ ರಾಜೀನಾಮೆ ಕಳುಹಿಸಬಹುದು. ಸ್ವಯಂಪ್ರೇರಣೆಯಿಂದ ರಾಜೀನಾಮೆ ಕೊಡುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಡಬೇಕು.

‘ಸದಸ್ಯರ ರಾಜೀನಾಮೆ ಸಕಾರಣವಾಗಿಲ್ಲ. ಅವರು ಸ್ವಯಂ ಪ್ರೇರಣೆಯಿಂದ ಸ್ಥಾನ ತ್ಯಜಿಸುತ್ತಿಲ್ಲ’ ಎಂದು ಸಭಾಪತಿಗೆ ಮನವರಿಕೆಯಾದರೆ ಅದು ಸ್ವೀಕಾರಕ್ಕೆ ಅರ್ಹವಾಗಿರುವುದಿಲ್ಲ.

ಸಭಾಪತಿಗಳು ಖುದ್ದು, ತಮ್ಮ ಸಚಿವಾಲಯದ ಅಧಿಕಾರಿಗಳು ಅಥವಾ ಪ್ರತಿನಿಧಿ ಮೂಲಕ ಸದಸ್ಯರ ರಾಜೀನಾಮೆ ಕುರಿತು ಮಾಹಿತಿ ಸಂಗ್ರಹಿಸಬಹುದು.
ರಾಜೀನಾಮೆ ಅಂಗೀಕಾರ ಆಗುವ ಮುನ್ನ ಯಾವುದೇ ಕ್ಷಣದಲ್ಲಿ ಅದನ್ನು ಹಿಂದಕ್ಕೆ ಪಡೆಯಬಹುದು. ಸದಸ್ಯರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ರಾಜ್ಯಸಭೆ ಸಮಾವೇಶಗೊಂಡಿದ್ದರೆ ಸಭಾಪತಿಗಳು ಈ ವಿಷಯ ತಿಳಿಸಬೇಕು. ಅದನ್ನು ಅಂಗೀಕರಿಸಿರುವುದನ್ನು ವಿವರಿಸಬೇಕು. ಅಧಿವೇಶನ ಸೇರದಿದ್ದರೆ ಮುಂದೆ ಸದನಕ್ಕೆ ಮಾಹಿತಿ ಕೊಡಬೇಕು.

‘ಸುಳ್ಳು ಆರೋಪ, ತಪ್ಪು ಮಾಹಿತಿ’
‘ನನ್ನ ವಿರುದ್ಧ ಆಧಾರರಹಿತ ಮತ್ತು ಸುಳ್ಳು  ಆಪಾದನೆಗಳನ್ನು ಮಾಡಲಾಗಿದೆ. ಹಣಕಾಸು ಸಚಿವಾಲಯವು ನೀತಿ ಸಮಿತಿಗೆ ತಪ್ಪು ಮಾಹಿತಿ ನೀಡಿದೆ’ ಎಂದು ವಿಜಯ ಮಲ್ಯ ಅವರು ರಾಜ್ಯಸಭೆ ಸಭಾಪತಿಗಳಿಗೆ ಕಳಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿರುವುದಾಗಿ ಉಪರಾಷ್ಟ್ರಪತಿ ವಿಶೇಷ ಅಧಿಕಾರಿ ಗುರುದೀಪ್ ಸಿಂಗ್ ಸಪ್ಪಾಲ್ ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ನ್ಯಾಯಸಮ್ಮತ ವಿಚಾರಣೆ ನಡೆಯುವುದಿಲ್ಲ ಹಾಗೂ ನ್ಯಾಯ ಸಿಗುವುದಿಲ್ಲ ಎಂದು ಮನವರಿಕೆ ಆಗಿದೆ. ತನಿಖೆಗೆ ಸಹಕರಿಸುತ್ತಿದ್ದರೂ ತಮ್ಮನ್ನು ಇಲ್ಲಸಲ್ಲದ ವಿವಾದದಲ್ಲಿ ಸಿಲುಕಿಸಲಾಗಿದೆ. ನೀತಿ ಸಮಿತಿಯ ಅಧ್ಯಕ್ಷರ ಪತ್ರ ಬಂದಿದ್ದು, ತಮ್ಮನ್ನು ರಾಜ್ಯಸಭೆಯಿಂದ ಉಚ್ಚಾಟಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ. ಅದಕ್ಕೆ ಉತ್ತರ ನೀಡಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ಹೆಸರು, ಘನತೆಗೆ ಮತ್ತಷ್ಟು ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.