ADVERTISEMENT

ರಾಜ್ಯೋದಯಕ್ಕೆ ಪ್ರಧಾನಿಗೆ ಆಹ್ವಾನ: ಟಿಆರ್‌ಎಸ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 19:30 IST
Last Updated 1 ಜೂನ್ 2014, 19:30 IST

ನವದೆಹಲಿ (ಪಿಟಿಐ): ತೆಲಂಗಾಣ ರಾಜ್ಯೋದಯ ಆಚರಣೆಯ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಭಾನುವಾರ ತಿಳಿಸಿದೆ.

ನೂತನ ರಾಜ್ಯವಾಗಿ ರಚನೆಯಾಗಿರುವ ­ ಮೊದಲ ಮುಖ್ಯಮಂತ್ರಿಯಾಗಿ ಕೆ.ಚಂದ್ರಶೇಖರ ರಾವ್‌ ಅವರು ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ (ಜೂನ್‌ 2) ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡದಿರುವುದು ವಿವಾದ ಎಬ್ಬಿಸಿತ್ತು.

‘ಈ ತಿಂಗಳ ಮಧ್ಯಭಾಗದಲ್ಲಿ ರಾಜ್ಯೋದಯದ ದಿನವನ್ನು ಆಚರಿಸಲು ಉದ್ದೇಶಿಸಲಾಗಿದೆ. ಪಕ್ಷದ ಮುಖ್ಯಸ್ಥ ಚಂದ್ರಶೇಖರ ರಾವ್‌ ಅವರ ­ ಪ್ರಮಾಣ ವಚನದ ಬಳಿಕ ಒಂದೆರಡು ದಿವಸಗಳಲ್ಲಿ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಈ ಸಮಾರಂಭಕ್ಕೆ ಆಹ್ವಾನಿಸುತ್ತೇವೆ’ ಎಂದು ಟಿಆರ್‌ಎಸ್‌ ಪಾಲಿಟ್‌ ಬ್ಯೂರೊ ಸದಸ್ಯ ಮತ್ತು ಸಂಸದ ಬಿ. ವಿನೋದ್‌ ಕುಮಾರ್‌ ತಿಳಿಸಿದ್ದಾರೆ.

‘ಹೊಸ ರಾಜ್ಯಕ್ಕೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರು ನೇಮಕವಾಗಿಲ್ಲ. ಇಂತಹ ಸಂದರ್ಭ­ದಲ್ಲಿ ಗಣ್ಯ ವ್ಯಕ್ತಿಗಳನ್ನು ಪ್ರಮಾಣವಚನ ಸಮಾ­ರಂಭಕ್ಕೆ ಆಹ್ವಾನಿಸಿದರೆ, ಅವರಿಗೆ ಭದ್ರತೆ ನೀಡುವುದು ಕಷ್ಟ. ಆದ್ದರಿಂದ ಸೋಮವಾರ ­ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಅವರನ್ನು ಆಹ್ವಾನಿಸಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾವ್‌ ಅವರು ತೆಲಂಗಾಣದ ಮೊದಲ ಮುಖ್ಯ­ಮಂತ್ರಿಯಾಗಿ ಸೋಮವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ ನೂತನ ರಾಜ್ಯಪಾಲರು ಮಧ್ಯಾಹ್ನ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಪ್ರಧಾನಿ ಅವರನ್ನು ರಾಜ್ಯೋದಯ ಆಚರಣೆಯ ಸಮಾರಂ­ಭಕ್ಕೆ ಆಹ್ವಾನಿಸಲು ನಿರ್ಧರಿಸಿದ್ದೇವೆ. ಚಂದ್ರಶೇಖರ ರಾವ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯೋದಯ ಸಮಾರಂಭದ ದಿನಾಂಕವನ್ನು ಗೊತ್ತುಮಾಡಲಿದ್ದಾರೆ’ ಎಂದೂ ಹೇಳಿದರು. 

ತೆಲಂಗಾಣದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ, ಆಂಧ್ರದಲ್ಲಿ  ಮುಂದುವರಿಕೆ
(ನವದೆಹಲಿ ವರದಿ):
ಕೆ.ಚಂದ್ರಶೇಖರ ರಾವ್‌ ಅವರು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ಸೋಮವಾರ ಬೆಳಿಗ್ಗೆ 8.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾಗಿ ಅವಿಭಜಿತ ಆಂಧ್ರಪ್ರದೇಶ­ದಲ್ಲಿ ಜಾರಿಯಲ್ಲಿರುವ ರಾಷ್ಟ್ರಪತಿ ಆಡಳಿತವನ್ನು ತೆಲಂಗಾಣಕ್ಕೆ ಸೀಮಿತವಾಗುವಂತೆ ಸೋಮವಾರ (ಜೂನ್‌ 2)ಅಂತ್ಯಗೊಳ್ಳಲಿದೆ  ಎಂದು ಮೂಲಗಳು ತಿಳಿಸಿವೆ.

ಆದರೆ, ಆಂಧ್ರಪ್ರದೇಶದ ಭಾಗದಲ್ಲಿ  ಇನ್ನೂ ಒಂದು ವಾರ ಮುಂದುವರಿಯಲಿದೆ. ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜೂನ್‌ 8ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕುರಿತ ಅಧಿಸೂಚನೆಯು ಸೋಮವಾರ ಬೆಳಿಗ್ಗೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅವಿಭಜಿತ ಆಂಧ್ರಪ್ರದೇಶದ ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್ ಅವರಿಗೇ ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳ ರಾಜ್ಯಪಾಲರ ಹೊಣೆಯನ್ನು ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ನಿಯೋಜಿತ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲು ತೆಲಂಗಾಣ ರಾಜ್ಯಪಾಲರಾಗಿ ನರಸಿಂಹನ್‌ ಅವರು ಪ್ರಮಾಣವಚನ ಸ್ವೀಕರಿಸುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.