ADVERTISEMENT

ರಾಹುಲ್‌ ಪರ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ಅಮೇಠಿ (ಪಿಟಿಐ): ಶಾಶ್ವತ ವಾಸಸ್ಥಳದ ದೃಢೀಕರಣ ಪತ್ರ ಕೋರಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಪರವಾಗಿ  ಸಲ್ಲಿಸಲಾದ ಅರ್ಜಿಯನ್ನು ಸ್ಥಳೀಯ ಆಡಳಿತ ತಿರಸ್ಕರಿಸಿದೆ.

‘ಇಂತಹ ಪ್ರಮಾಣ ಪತ್ರ ಬೇಕಿದ್ದರೆ ಅರ್ಜಿದಾರರೇ (ರಾಹುಲ್‌ ಗಾಂಧಿ) ರುಜು ಮಾಡಿದ ಅರ್ಜಿ ಸಲ್ಲಿಸಬೇಕು ಅಥವಾ ಅಂತಹ ಅರ್ಜಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು ಮತ್ತು ಅಗತ್ಯ ಪುರಾವೆಗಳನ್ನು ಅಡಕ ಮಾಡಿರಬೇಕು. ಆದರೆ, ಈ ಅರ್ಜಿಯನ್ನು ರಾಹುಲ್‌ ಗಾಂಧಿ ಅವರ ಪರವಾಗಿ ರಾಜೇಂದ್ರ ಸಿಂಗ್‌ ಅವರು ಸಲ್ಲಿಸಿದ್ದರು. ಅಗತ್ಯ ದಾಖಲೆಗಳನ್ನೂ ಸಲ್ಲಿಸಿರಲಿಲ್ಲ. ಇಂತಹ ಅರ್ಜಿಯನ್ನು ಮಾನ್ಯ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಜಿಲ್ಲಾಧಿಕಾರಿ ಜಗತ್‌ರಾಜ್‌ ತ್ರಿಪಾಠಿ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಉಮೇದುವಾರಿಕೆ ಮಾಡಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಾವು ಸ್ಪರ್ಧಿಸಿರುವ ಕ್ಷೇತ್ರ ವ್ಯಾಪ್ತಿಯ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಬೇಕು. ಇಂತಹ ಖಾತೆ ತೆರೆಯಲು ವಾಸಸ್ಥಳ ದೃಢೀಕರಣ ಪತ್ರ ಅಗತ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಅಮೇಠಿ ಕ್ಷೇತ್ರದ ಕಾಂಗ್ರೆಸ್‌ ವಕ್ತಾರ ರಾಜೇಂದ್ರ ಸಿಂಗ್‌ ಅವರು ಕ್ಷೇತ್ರದ ಲೋಕಸಭಾ ಪ್ರತಿನಿಧಿಯಾದ ರಾಹುಲ್‌ ಗಾಂಧಿ ಅವರ ಪರವಾಗಿ ಶಾಶ್ವತ ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಮುನ್ಷಿಗಂಜ್‌ ಅತಿಥಿ ಗೃಹವನ್ನು ರಾಹುಲ್‌ ಅವರ ತಾತ್ಕಾಲಿಕ ನಿವಾಸ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.