ADVERTISEMENT

ರಾಹುಲ್ ಟ್ವೀಟ್‌ ಜನಪ್ರಿಯತೆ ಬಿಜೆಪಿ– ಕಾಂಗ್ರೆಸ್‌ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
ರಾಹುಲ್ ಟ್ವೀಟ್‌ ಜನಪ್ರಿಯತೆ ಬಿಜೆಪಿ– ಕಾಂಗ್ರೆಸ್‌ ವಾಗ್ವಾದ
ರಾಹುಲ್ ಟ್ವೀಟ್‌ ಜನಪ್ರಿಯತೆ ಬಿಜೆಪಿ– ಕಾಂಗ್ರೆಸ್‌ ವಾಗ್ವಾದ   

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ @officeofRGಯ ಹಿಂಬಾಲಕರ ಸಂಖ್ಯೆ ಮತ್ತು ಅವರ ಟ್ವೀಟ್‌ಗಳಿಗೆ ಬರುವ ರೀಟ್ವೀಟ್‌ಗಳ ಸಂಖ್ಯೆಯಲ್ಲಿ ಈಚಿನ ದಿನಗಳಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ರಾಹುಲ್ ಅವರ ಹಿಂಬಾಲಕರು ಮತ್ತು ಅವರ ರೀಟ್ವೀಟ್‌ಗಳ ಅಸಲಿಯತ್ತನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

ಸ್ಮೃತಿ ಇರಾನಿ ಅವರು, ‘ರಷ್ಯಾ, ಇಂಡೊನೇಷ್ಯಾ ಮತ್ತು ಕಜಕಸ್ತಾನಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ಯೋಜಿಸಿರಬೇಕು’ ಎಂಬ ಟ್ವೀಟ್ ಮಾಡಿದ್ದಾರೆ. ಅದರ ಜತೆಯಲ್ಲೇ @ani_digital ಖಾತೆಯಲ್ಲಿ ಪ್ರಕಟವಾಗಿರುವ ಸುದ್ದಿಯೊಂದನ್ನು ಸ್ಮೃತಿ ತಮ್ಮ ಟ್ವೀಟ್‌ಗೆ ಲಗತ್ತಿಸಿದ್ದಾರೆ.

‘ಅಕ್ಟೋಬರ್ 15ರಂದು ರಾಹುಲ್ ಗಾಂಧಿ ಅವರು, ‘ಮೋದಿಜಿ. ಅಧ್ಯಕ್ಷ ಟ್ರಂಪ್ ಅವರಿಗೆ ಮತ್ತೊಂದು ಅಪ್ಪುಗೆ ಬೇಕಿರಬಹುದು’ ಎಂದು ಟ್ವೀಟ್ ಮಾಡಿದ್ದರು. ಅ.15 ರಂದು ಟ್ರಂಪ್ ಪಾಕಿಸ್ತಾನದ ಜತೆ ಸಂಬಂಧ ಸುಧಾರಿಸಲಾಗುತ್ತದೆ ಎಂದು ಘೋಷಿಸಿದ್ದರು. ಅಮೆರಿಕ ಭೇಟಿ ವೇಳೆ ಟ್ರಂಪ್ ಅವರನ್ನು ಮೋದಿ ಎರಡೆರಡು ಬಾರಿ ಅಪ್ಪಿಕೊಂಡಿದ್ದರು. ಮೋದಿ ಅಪ್ಪುಗೆ ಮತ್ತು ಟ್ರಂಪ್ ಹೇಳಿಕೆಯನ್ನು ಲೇವಡಿ ಮಾಡಿ ರಾಹುಲ್ ಈ ಟ್ವೀಟ್ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ರಾಹುಲ್ ಟ್ವೀಟ್‌ನ ರೀಟ್ವೀಟ್‌ಗಳ ಸಂಖ್ಯೆ 20 ಸಾವಿರ ದಾಟಿತು. ಈಗ ಆ ರೀಟ್ವೀಟ್‌ಗಳ ಸಂಖ್ಯೆ 30 ಸಾವಿರ ದಾಟಿದೆ’ ಎಂದು ಆ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ರಾಹುಲ್‌ ಅವರ ಟ್ವೀಟ್‌ಗೆ ರೀಟ್ವೀಟ್‌ ಮಾಡಿರುವ ಟ್ವಿಟರ್‌ ಖಾತೆಗಳಲ್ಲಿ ಹಲವು ರಷ್ಯಾ, ಇಂಡೊನೇಷ್ಯಾ ಮತ್ತು ಕಜಕಸ್ತಾನ ಮೂಲದವು. ಅವುಗಳಲ್ಲಿ ಕೆಲವನ್ನು ನಾಲ್ಕು ದಿನಗಳ ಹಿಂದಷ್ಟೇ ಆರಂಭಿಸಲಾಗಿದೆ. ವಿಶ್ವದ ಯಾವ್ಯಾವುದೋ ವಿಷಯಕ್ಕೆ ಸಂಬಂಧಿಸಿದ ಟ್ವೀಟ್‌ಗಳಿಗೆ ಈ ಖಾತೆಗಳಿಂದ ರೀಟ್ವೀಟ್ ಮಾಡಲಾಗಿದೆ. ಆ ಯಾವ್ಯಾವುದೋ ವಿಷಯಗಳಲ್ಲಿ ರಾಹುಲ್ ಗಾಂಧಿ ಅವರ ಟ್ವೀಟ್ ಸಹ ಒಂದು. ಬಾಟ್‌ಗಳ ಮೂಲಕ ಈ ರೀಟ್ವೀಟ್‌ಗಳು ಮೂಡುತ್ತಿರಬಹುದು’ ಎಂದು ವರದಿಯಲ್ಲಿ ಶಂಕಿಸಲಾಗಿದೆ.

‘ರಾಹುಲ್ ಟ್ವೀಟ್ ಮಾಡಿದ್ದು ಆರು ದಿನಗಳ ಹಿಂದೆ. ಆದರೆ ಈ ಬಾಟ್‌ಗಳನ್ನು 4 ದಿನಗಳ ಹಿಂದೆ ಸೃಷ್ಟಿಸಲಾಗಿದೆ’ ಎಂದು ಕಾಂಗ್ರೆಸ್‌ ನಾಯಕ ಸಂಜಯ್ ಝಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.