ADVERTISEMENT

ರೂಪದರ್ಶಿ ವಿರುದ್ಧ ಕಾನೂನುಕ್ರಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಭಾವನ ವಿರುದ್ಧವೇ ಸುಳ್ಳು ಅತ್ಯಾಚಾರ ದೂರು ದಾಖಲಿಸಿದ ರೂಪದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿಯ ನ್ಯಾಯಾಲಯ ಆಕೆಯ ವಿರುದ್ಧವೇ ಕಾನೂನು ಕ್ರಮಕ್ಕೆ ಆದೇಶಿಸಿದ ಮತ್ತೊಂದು ಅಪರೂಪದ ಘಟನೆ  ಸೋಮವಾರ ನಡೆದಿದೆ.

ಕಳೆದ ಫೆಬ್ರುವರಿಯಲ್ಲಿ ಬಿಂಡಾಪುರ ಪೊಲೀಸ್‌ ಠಾಣೆ­ಯಲ್ಲಿ ರೂಪದರ್ಶಿಯೊಬ್ಬಳು ತನ್ನ ಭಾವನ ವಿರುದ್ಧವೇ ಅತ್ಯಾಚಾರ ದೂರು ದಾಖಲಿಸಿದ್ದಳು. 2012­ರಲ್ಲಿ  ತನಗೆ ಅಮಲು  ಬರುವ ಪೇಯ ಕುಡಿಸಿದ್ದ ತನ್ನ ಭಾವ ಜೈಪುರದ ಹೋಟೆಲ್‌ ಹಾಗೂ ನಂತರ ಎರಡು ಬಾರಿ ಮನೆಯಲ್ಲಿಯೇ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ರೂಪದರ್ಶಿ ದೂರು ನೀಡಿದ್ದಳು.

  ತಾನು ನಿರಪರಾಧಿ ಎಂದು ವಾದಿಸಿದ ಆರೋಪಿ, ತನ್ನ ತಮ್ಮನನ್ನು ವರಿಸಿರುವ ರೂಪದರ್ಶಿ ಹಣಕ್ಕಾಗಿ ಆತನನ್ನೂ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾಳೆ ಎಂದು ಹೇಳಿದರು.

ಜೈಪುರ ಹೋಟೆಲ್‌ ಅಥವಾ ಮನೆಯಲ್ಲಿ ರೂಪದರ್ಶಿ ಮೇಲೆ ಅತ್ಯಾಚಾರ ನಡೆದಿರುವುದನ್ನು ಸಾಬೀತು ಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ನ್ಯಾಯಾಲಯಕ್ಕೆ ಲಭ್ಯವಾಗದ ಕಾರಣ ಆರೋಪಿಯನ್ನು  ಬಿಡುಗಡೆ ಮಾಡಲಾಯಿತು.

ತನ್ನನ್ನು ಮದುವೆಯಾಗಲು ನಿರಾಕರಿಸಿದ ಅನಿವಾಸಿ ಭಾರತೀಯ ಸೇರಿದಂತೆ ಅನೇಕರ ವಿರುದ್ಧ ರೂಪದರ್ಶಿ ಸುಳ್ಳು ಅತ್ಯಾ­ಚಾರ ಆರೋಪ ದಾಖಲಿಸಿರುವುದು ವಿಚಾರಣೆ ವೇಳೆ ಬಹಿರಂಗವಾಯಿತು. ತನ್ನ ಪರಿಚಿತರ ವಿರುದ್ಧವೇ ಸುಳ್ಳು ಆರೋಪ ದಾಖಲಿಸುವುದು  ಆಕೆಗೆ ಹವ್ಯಾಸವಾಗಿತ್ತು.

ಅದೇ ರೀತಿ ತನ್ನ ಭಾವನ ವಿರುದ್ಧವೂ ಸುಳ್ಳು ಅತ್ಯಾಚಾರ ದೂರು ನೀಡಿರುವುದಾಗಿ ರೂಪದರ್ಶಿ ಒಪ್ಪಿಕೊಂಡಳು.
ವಿಚಾರಣೆ ನಡೆಸಿದ ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವೀರೇಂದರ್‌ ಭಟ್‌ ಅವರು ಆರೋಪಿ­ಯನ್ನು ಖುಲಾಸೆಗೊಳಿಸಿದರು. ಸುಳ್ಳು ದೂರು ದಾಖಲಿ­ಸಿದ ರೂಪದರ್ಶಿ ವಿರುದ್ಧ  ಕ್ರಮ ಜರುಗಿಸುವಂತೆ ಆದೇಶಿಸಿ­ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.