ADVERTISEMENT

ರೈಲಿನಲ್ಲಿ ಅವಳಿ ಸ್ಫೋಟ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 1 ಮೇ 2014, 9:56 IST
Last Updated 1 ಮೇ 2014, 9:56 IST

ಚೆನ್ನೈ (ಐಎಎನ್‌ಎಸ್‌/ ಪಿಟಿಐ): ಬೆಂಗಳೂರು–ಗುವಾಹಟಿ ರೈಲು ಚೆನ್ನೈ ನಿಲ್ದಾಣ ತಲುಪುತಿದ್ದಂತೆಯೇ ಎರಡು ಬೋಗಿಗಳಲ್ಲಿ ಗುರುವಾರ ಅವಳಿ ಬಾಂಬ್‌ ಸ್ಫೋಟ ನಡೆದಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಮಹಿಳೆ ಆಂಧ್ರಪ್ರದೇಶದ ಗುಂಟೂರಿನವರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ 11 ಜನರು ಗಾಯಗೊಂಡಿದ್ದು, ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ.

‘ಬೆಂಗಳೂರು–ಗುವಾಹಟಿ  ರೈಲು ನಿಲ್ದಾಣ ತಲುಪಿದ ಸುಮಾರು 10 ನಿಮಿಷಗಳ ಬಳಿಕ ಈ ದುರ್ಘಟನೆ ಸಂಭವಿಸಿದೆ. ರೈಲಿನ S4 ಹಾಗೂ S5 ಬೋಗಿಗಳಲ್ಲಿ ಬೆಳಿಗ್ಗೆ 7.15ಕ್ಕೆ ಸ್ಫೋಟಗಳು ನಡೆದಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆಗಾಗಿ ಎರಡು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ’ ಎಂದು ರೈಲ್ವೇ ವಿಭಾಗದ ಪೊಲೀಸ್‌ ಮಹಾನಿರ್ದೇಶಕಿ ಸೀಮಾ ಅಗರ್ವಾಲ್‌ ತಿಳಿಸಿದ್ದಾರೆ.

ADVERTISEMENT

‘ದುರ್ಘಟನೆಯಲ್ಲಿ ಆಂಧ್ರದ ಗುಂಟೂರಿನ ಸ್ವಾತಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 25 ಸಾವಿರ ಹಾಗೂ ಚಿಕ್ಕಪುಟ್ಟ ಪೆಟ್ಟಾಗಿರುವ ಪ್ರಯಾಣಿಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ’ ಎಂದು ದಕ್ಷಿಣ ರೈಲ್ವೇ ಪ್ರಧಾನ ವ್ಯವಸ್ಥಾಪಕ ರಾಕೇಶ್‌ ಮಿಶ್ರಾ ತಿಳಿಸಿದ್ದಾರೆ.

ಎಸ್‌ಐಟಿ ಯಿಂದ ತನಿಖೆ: ಅವಳಿ ಬಾಂಬ್‌ ಸ್ಫೋಟ ಘಟನೆ ಸಂಬಂಧ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ ಎಂದು  ತಮಿಳುನಾಡು ಪೊಲೀಸ್‌ ಮಹಾ ನಿರ್ದೇಶಕ ಕೆ  ರಾಮಾನುಜನ್‌ ತಿಳಿಸಿದ್ದಾರೆ.

ಅಲ್ಲದೇ, ‘ಇದು ಗಂಭೀರ ಸ್ವರೂಪದ ಸ್ಫೋಟವಲ್ಲ. ಸ್ಫೋಟದ ಹಿಂದೆ ಚೆನ್ನೈ ಗುರಿಯಾಗಿಸಿಕೊಂಡ ಲಕ್ಷಣಗಳಿಲ್ಲ. ರೈಲು ವಿಳಂಬವಾಗಿ ಪ್ರಯಾಣ ಆರಂಭಿಸಿತ್ತು. ಸ್ಫೋಟದ ಗುರಿ ಬೇರೆ ಪ್ರದೇಶವಾಗಿತ್ತು ಅನ್ನಿಸುತ್ತಿದೆ’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ರೈಲ್ವೇ ಇಲಾಖೆ ಸಹಾಯವಾಣಿ ಆರಂಭಿಸಿದೆ. ದೂರವಾಣಿ ಸಂಖ್ಯೆ ಇಂತಿದೆ: 044-25357398.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.