ADVERTISEMENT

ರೈಲು ಪ್ರಯಾಣ ದರ ಏರಿಕೆ ಇಂದಿನಿಂದ

ಹೆಚ್ಚಳಕ್ಕೆ ಎನ್‌ಡಿಎಯಲ್ಲೇ ಅಪಸ್ವರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ನವದೆಹಲಿ: ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರ ಏರಿಕೆ ಬುಧ­ವಾರದಿಂದ ಜಾರಿಗೆ ಬರಲಿದೆ. ರೈಲು ಪ್ರಯಾಣ ದರ ಹೆಚ್ಚಳವು 80 ಕಿ.ಮೀ.­ವರೆಗಿನ ಉಪನಗರಗಳ ದ್ವಿತೀಯ ದರ್ಜೆ ಪ್ರಯಾಣಕ್ಕೆ ಅನ್ವಯ­ವಾಗು­ವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲು ಪ್ರಯಾಣ ದರವನ್ನುಶೇ 14.2 ಮತ್ತು ಸರಕು ಸಾಗಣೆ ದರವನ್ನು ಶೇ 6.5ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರಿಂದ ₨ 8,000 ಕೋಟಿ ಹೆಚ್ಚು­ವರಿ­­ಯಾಗಿ ವರಮಾನ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸದ್ಯ ರೈಲ್ವೆ ಪ್ರತಿದಿನ ₨ 900 ಕೋಟಿ ನಷ್ಟ ಅನುಭವಿಸುತ್ತಿದೆ.

ಮುಂಚಿತವಾಗಿ ಟಿಕೆಟ್‌ ಕಾಯ್ದಿರಿ­ಸಿರುವ ಪ್ರಯಾಣಿಕರು, ಪ್ರಯಾಣ ಆರಂಭಕ್ಕೆ ಮೊದಲು ವ್ಯತ್ಯಾಸದ ದರ­ವನ್ನು ಪಾವತಿಸಬೇಕು. ಮುಂಗಡ ಟಿಕೆಟ್‌ ಕಾಯ್ದಿರಿಸುವ ಸ್ಥಳ ಅಥವಾ ಟಿಟಿಇ ಬಳಿ ಹಣ ಪಾವತಿ ಮಾಡಬ­ಹುದು ಎಂದು ಮೂಲಗಳು ತಿಳಿಸಿವೆ.

ದರ ಏರಿಕೆಯು ಮಾಸಿಕ ಪಾಸು­ಗಳಿಗೂ ಅನ್ವಯವಾಗುತ್ತದೆ. ದ್ವಿತೀಯ ದರ್ಜೆಯ (ಸಬರ್ಬನ್‌ ಮತ್ತು ನಾನ್‌ ಸಬರ್ಬನ್‌) ಮಾಸಿಕ ಪಾಸುಗಳ ದರ ಹೆಚ್ಚಳವು ಈಗಿನ 15 ಏಕಮುಖ ಸಂಚಾರದ ಬದಲು 30 ಏಕಮುಖ ಸಂಚಾರದ ಆಧಾರದಲ್ಲಿ ನಿರ್ಧಾರವಾಗಲಿವೆ.

ವ್ಯಾಪಕ ವಿರೋಧ: ಈ ಮಧ್ಯೆ, ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗು­ತ್ತಿದೆ. ದೆಹಲಿ ಪ್ರದೇಶ ಕಾಂಗ್ರೆಸ್‌ ಕಾರ್ಯ­ಕರ್ತರು ಪಾಲಂ ರೈಲು ನಿಲ್ದಾಣದಲ್ಲಿ ರೈಲು ಮಂಗಳವಾರ ರೈಲು ತಡೆ ಚಳವಳಿ ನಡೆಸಿದರು. ರೈಲ್ವೆ ಸಚಿವ ಡಿ.ವಿ ಸದಾನಂದಗೌಡ ಅವರ ಪ್ರತಿಕೃತಿ ದಹನ ಮಾಡಿದರು. ದೆಹಲಿ­ಯಿಂದ ಮೊರದಾಬಾದ್‌ ಕಡೆಗೆ ಹೊರಟಿದ್ದ ರೈಲಿಗೆ ಸುಮಾರು 30 ನಿಮಿಷ ತಡೆ ಹಾಕಿದರು.

ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಸಂಸದರು ರೈಲ್ವೆ ಸಚಿವ ಸದಾನಂದಗೌಡ ಅವರನ್ನು ಭೇಟಿ ಮಾಡಿ ದರ ಏರಿಕೆ ವಾಪಸ್‌

ಹೆಚ್ಚುವರಿ ಮೊತ್ತ: ಪ್ರತ್ಯೇಕ ಕೌಂಟರ್‌
ಹುಬ್ಬಳ್ಳಿ: ಇದೇ 25ರಿಂದ ರೈಲು ಪ್ರಯಾಣ ದರ ಏರಿಕೆಯಾಗಲಿರುವ ಹಿನ್ನೆಲೆ­ಯಲ್ಲಿ ಈ ಮೊದಲೇ ಸೀಟು ಕಾದಿರಿಸಿರುವ ಪ್ರಯಾಣಿಕರಿಂದ ಹೆಚ್ಚುವರಿ ಮೊತ್ತ ಪಡೆದುಕೊಳ್ಳಲು ಪ್ರತ್ಯೇಕ ಕೌಂಟರ್‌ ತೆರೆಯುವಂತೆ ಮೂರೂ ವಿಭಾಗಗಳಿಗೆ ನೈರುತ್ಯ ರೈಲ್ವೆ ಸೂಚಿಸಿದೆ.
ಸೀಜನ್‌ ಟಿಕೆಟ್‌ಗಳಿಗೆ ‘ಹೊರೆ’ ಇಲ್ಲ: ಪ್ರಯಾಣ ದರ ಏರಿಕೆಯಾದರೂ ಸೀಜನ್‌ ಟಿಕೆಟ್‌ ಖರೀದಿಸಿರುವವರು ಹೊಸ ದರಕ್ಕೆ ಅನುಗುಣವಾಗಿ ಹೆಚ್ಚುವರಿ ಹಣ ಭರಿಸುವ ಅಗತ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ, ಮಾಸಿಕ ಮತ್ತು ವ್ಯಾಪಾರಿಗಳ ಸೀಜನ್ ಟಿಕೆಟ್‌ ಖರೀದಿಸಿದವರು ಹೆಚ್ಚುವರಿ ಹಣ ಭರಿಸಬೇಕಾಗಿಲ್ಲ. ವಿಶೇಷ ಟಿಕೆಟ್‌ ದರ ಇರುವ ರೈಲು ಪ್ರಯಾಣಿಕರು ಕೂಡ ಹೆಚ್ಚುವರಿ ದರ ನೀಡುವ ಅಗತ್ಯ ಈಗ ಇಲ್ಲ ಎಂದು ಹೇಳಿದೆ.

ಪಡೆಯು­ವಂತೆ ಆಗ್ರಹಿಸಿದರು. ಮುಂಬೈ ಉಪ ನಗರ ರೈಲು ಪ್ರಯಾಣಕರಿಗೆ ದರ ಏರಿಕೆ ನುಂಗಲಾರದ ತುತ್ತಾಗಿದೆ. ಸೀಸನ್‌ ಟಿಕೆಟ್‌ ಪಡೆದು ಓಡಾಡುವ ಲಕ್ಷಾಂತರ ಪ್ರಯಾಣಿಕರು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ನಿತ್ಯ ಸುಮಾರು 75 ಲಕ್ಷ ಪ್ರಯಾ­ಣಿಕರು ಉಪ ನಗರಗಳ ರೈಲುಗಳಲ್ಲಿ ಓಡಾಡುತ್ತಿದ್ದಾರೆ.

ಇದುವರೆಗೆ ಮಾಸಿಕ ರೂ 115 ರೂಪಾಯಿ ಕೊಡುತ್ತಿದ್ದ ಪ್ರಯಾಣಿಕರು ದರ ಏರಿಕೆ ಬಳಿಕ ರೂ. 330 ರೂಪಾಯಿ ಪಾವತಿಸಬೇಕಾಗಿದೆ ಎಂದು ವಿವರಿಸಿದರು.

ಮಹಾರಾಷ್ಟ್ರ ವಿಧಾನಸಭೆಗೆ ಸದ್ಯ­ದಲ್ಲೇ ಚುನಾವಣೆ ನಡೆಯಲಿದ್ದು, ಖಂಡಿತಾ ದರ ಏರಿಕೆ ಪರಿಣಾಮ ಬೀರ­ಲಿದೆ. ಈ ಹಿನ್ನೆಲೆಯಲ್ಲಿ ಏರಿಕೆ ನಿರ್ಧಾರವನ್ನು ಪುನರ್‌ ಪರಿಶೀಲಿಸ­ಬೇಕು ಎಂದು ಒತ್ತಾಯಿಸಿದರು.

ಶಿವಸೇನೆ ಮಹಾರಾಷ್ಟ್ರದಲ್ಲಿ ಬಿಜೆ­ಪಿಯ ಹಳೇ ಮಿತ್ರ ಪಕ್ಷವಾಗಿದ್ದು, ದರ ಏರಿಕೆಯನ್ನು ಕಟುವಾಗಿ ಟೀಕಿಸಿದೆ. ಉದ್ಧವ ಠಾಕ್ರೆ ಅತ್ಯಂತ ಖಾರವಾಗಿ ಸರ್ಕಾರದ ತೀರ್ಮಾನ ಟೀಕಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಇವೆ­ರಡೂ ಮಿತ್ರ ಪಕ್ಷಗಳು ಒಗ್ಗೂಡಿ 41ಸ್ಥಾನಗಳನ್ನು ಗೆದ್ದುಕೊಂಡಿವೆ. ರಾಜ್ಯದ ಒಟ್ಟು ಲೋಕಸಭೆ ಸ್ಥಾನಗಳು 48. ಹಣಕಾಸು ಸಚಿವ ಅರುಣ್‌ ಜೇಟ್ಲಿ, ರೈಲ್ವೆ ಸಚಿವ ಸದಾನಂದಗೌಡ ಸೇರಿದಂತೆ ಅನೇಕ ಹಿರಿಯ ಸಚಿವರು ಈಗಾಗಲೇ ಸರ್ಕಾರದ ತೀರ್ಮಾನ­ವನ್ನು ಸಮರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT