ನವದೆಹಲಿ (ಪಿಟಿಐ): ರೈಲ್ವೆ ಸಚಿವರಾದ ನಂತರ ಇದೇ ಮೊದಲ ಬಾರಿ ಸದಾನಂದ ಗೌಡ ಅವರು ಮಂಗಳವಾರ ಮಂಡಿಸಲಿರುವ 2014–15ರ ರೈಲ್ವೆ ಬಜೆಟ್ ಸಹಜವಾಗಿ ಭಾರಿ ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿದೆ.
ಬಜೆಟ್ಗೂ ಮುನ್ನವೇ ಶೇ 14.2 ರಷ್ಟು ರೈಲು ಪ್ರಯಾಣ ದರ ಹಾಗೂ ಸರಕು ಸಾಗಣೆ ದರ (ಶೇ 6.5) ಹೆಚ್ಚಿಸಿರುವ ಕಾರಣ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆಯೂ ಅವರಿಗಿದೆ. ರೈಲ್ವೆ ಇಲಾಖೆಯ ಸದ್ಯದ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟು
ಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ. ಹೀಗಾಗಿ ಸಹಜವಾಗಿ ಇದು ವಾಸ್ತವ ಬಜೆಟ್ ಆಗಿರುತ್ತದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಬಜೆಟ್ನಲ್ಲಿ ಹೊಸ ರೈಲು, ರೈಲು ಮಾರ್ಗ ಘೋಷಿಸುವ ಮುನ್ನ ಅವರು, ರೈಲ್ವೆ ಇಲಾಖೆಯ ವರಮಾನ, ನಷ್ಟದಂತಹ ಆರ್ಥಿಕ ಹಾಗೂ
ವಾಸ್ತವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಾರೆ.
ನಷ್ಟದಲ್ಲಿರುವ ರೈಲ್ವೆ ಇಲಾಖೆಯ ವರಮಾನ ಹೆಚ್ಚಿಸಲು ಹೊಸ ಮಾರ್ಗೋಪಾಯ ಹಾಗೂ ತಂತ್ರಗಳನ್ನೂ ಅವರು ಪ್ರಸಕ್ತ ಬಜೆಟ್ನಲ್ಲಿ ಘೋಷಿಸಬಹುದು.
ಕೆಲವು ಹಳೆಯ ಯೋಜನೆಗಳನ್ನು ಕೈಬಿಡುವ ಸಾಧ್ಯತೆಗಳು ದಟ್ಟವಾಗಿದ್ದು ಆದ್ಯತೆ ಆಧಾರದ ಮೇಲೆ ಕೆಲವು ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯೂ ಇದೆ.
ಬಜೆಟ್ನಲ್ಲಿ ಏನಿರಬಹುದು?
*ತೈಲ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ರೈಲುಗಳಲ್ಲಿ ಸೌರಶಕ್ತಿ, ಜೈವಿಕ ಇಂಧನಗಳಂತಹ ಪರ್ಯಾಯ ಶಕ್ತಿಗಳ ಬಳಕೆಗೆ ಪ್ರೋತ್ಸಾಹ
*ರೈಲು ನಿಲ್ದಾಣಗಳ ಖಾಲಿ ಜಾಗ ಹಾಗೂ ರೈಲುಗಳ ಮೇಲೆ ಸೌರಶಕ್ತಿ ಫಲಕ ಅಳವಡಿಕೆಗೆ ಒತ್ತು
*ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮುಂಬೈ ಉಪನಗರಗಳ ವಿದ್ಯುತ್ ಚಾಲಿತ ರೈಲು ಹಾಗೂ ಶತಾಬ್ದಿ ರೈಲು ಬೋಗಿಗಳಲ್ಲಿ ಸ್ವಯಂಚಾಲಿತ ಬಾಗಿಲು ಅಳವಡಿಸಲು ಕ್ರಿಯಾ ಯೋಜನೆ
*ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಜೋಡಿಸಲು ಹೊಸ ಸಂಪರ್ಕ ರೈಲುಗಳ ಆರಂಭ
*ರೈಲು ನಿಲ್ದಾಣಗಳ ಆಧುನೀಕರಣ, ಮೂಲಸೌಕರ್ಯ ವಿಸ್ತರಣೆ ಹಾಗೂ ಹೈಸ್ಪೀಡ್ ರೈಲುಗಳ ಆರಂಭಕ್ಕೆ ವಿದೇಶಿ ಹಾಗೂ ಖಾಸಗಿ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ
*ಹೈ ಸ್ಪೀಡ್ ರೈಲುಗಳ ಸಂಚಾರಕ್ಕೆ ‘ ಚತುಷ್ಕೋನ ಮಾರ್ಗ’ ನಿರ್ಮಾಣ ರೂಪುರೇಷೆ ಚರ್ಚೆ
*ರೈಲು ಪ್ರಯಾಣ ದರ ಪ್ರಾಧಿಕಾರ ಮತ್ತು ಹೈಸ್ಪೀಡ್ ರೈಲು ಪ್ರಾಧಿಕಾರ ಕುರಿತು ಸರ್ಕಾರದ ನಿಲುವು ಬಹಿರಂಗ ಸಾಧ್ಯತೆ
*ರೈಲು ಬೋಗಿಗಳ ಬ್ರೇಕ್ ವೈಫಲ್ಯ ಮತ್ತು ಗಾಲಿಗಳ ಬಿಸಿಯಾಗುವುದನ್ನು ಪತ್ತೆ ಹಚ್ಚಲು ಹಳಿಗಳ ಬದಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಕೆ
*ರೈಲು ಆಗಮನ, ನಿರ್ಗಮನ ವೇಳೆ, ಎಲ್ಲ ನಿಲ್ದಾಣಗಳ ಬಗ್ಗೆ ನಿಖರ ಮಾಹಿತಿ ನೀಡುವ ಹಾಗೂ ಸಂವಹನ ವ್ಯವಸ್ಥೆ ಬಲಗೊಳಿಸಲು ಹೊಸ ವ್ಯವಸ್ಥೆ
*ಪ್ರಯಾಣಿಕರಿಗೆ ರುಚಿ, ಶುಚಿಯಾದ ಆಹಾರ ಒದಗಿಸಲು ಕ್ಯಾಂಟೀನ್ ಗುಣಮಟ್ಟ ಹೆಚ್ಚಳಕ್ಕೆ ಕ್ರಮ
*ಎಲ್ಲ ಬೋಗಿಗಳಲ್ಲಿ ಇಲಿ, ಕ್ರಿಮಿ, ಕೀಟಗಳ ನಿಯಂತ್ರಣಕ್ಕೆ ಕ್ರಮ
*ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅಪಘಾತ ತಡೆ ಮತ್ತು ಬೆಂಕಿ ಅವಘಡ ತಡೆಯಲು ಮುಂಜಾಗ್ರತಾ ಸುರಕ್ಷತಾ ಕ್ರಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.