ADVERTISEMENT

ವದಂತಿಗೆ ತೆರೆ: ಉದ್ಧವ್‌- – ಷಾ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2014, 20:23 IST
Last Updated 4 ಸೆಪ್ಟೆಂಬರ್ 2014, 20:23 IST

ಮುಂಬೈ (ಪಿಟಿಐ):  ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಗೆ ಸಂಬಂಧಿಸಿ ಶಿವಸೇನೆ-ಬಿಜೆಪಿ ಮೈತ್ರಿಕೂಟದಲ್ಲಿ ಬಿರುಕುಂಟಾಗಿದೆ ಎಂಬ ವದಂತಿಗಳಿಗೆ ತೆರೆ ಎಳೆಯುವ ಯತ್ನವಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಗುರುವಾರ ರಾತ್ರಿ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಮುಂಬೈಯಲ್ಲಿ ಭೇಟಿಯಾದರು.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿ ಮುಂಬೈಗೆ ಬಂದ ಷಾ, ಬಾಂದ್ರಾ ದಲ್ಲಿರುವ ಉದ್ಧವ್‌ ನಿವಾಸಕ್ಕೆ ಭೇಟಿ ನೀಡಿದರು. ರಾತ್ರಿ 10 ಗಂಟೆ ಹೊತ್ತಿಗೆ ಉದ್ಧವ್‌ ನಿವಾಸಕ್ಕೆ ಷಾ ಬಂದರು. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್‌ ಮತ್ತು ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷ ನಾಯಕ ವೀನೋದ್‌ ತಾವಡೆ ಜತೆ ಗಿದ್ದರು.

ಷಾ ಅವರು ಉದ್ಧವ್‌ ನಿವಾಸಕ್ಕೆ ಹೋಗಿ ಅವರನ್ನು ಭೇಟಿ ಮಾಡುವರೇ ಎಂಬ ಬಗ್ಗೆ ಬುಧ­ವಾರದ ವರೆಗೆ ಖಚಿತತೆ ಇರಲಿಲ್ಲ. ಹಿಂದಿನಿಂದಲೂ ಬಿಜೆಪಿಯ ಉನ್ನತ ಮುಖಂಡರು ಮುಂಬೈಗೆ ಬಂದಾಗ ಶಿವಸೇನಾ ಮುಖ್ಯಸ್ಥರ ನಿವಾಸ ‘ಮಾತೋಶ್ರೀ’ಗೆ ಭೇಟಿ ನೀಡುವುದು ಪರಂಪರೆಯೇ ಆಗಿ ಹೋಗಿದೆ.

ಹಾಗಿದ್ದರೂ ಷಾ ಅವರ ಮುಂಬೈ ಭೇಟಿಯ ವೇಳಾಪಟ್ಟಿಯಲ್ಲಿ ಉದ್ಧವ್‌ ನಿವಾಸದ ಭೇಟಿ ಇರಲಿಲ್ಲ.  ಆದರೆ ಷಾ ಅವರು  ಉದ್ಧವ್‌ ನಿವಾಸಕ್ಕೆ ಹೋಗಲಿದ್ದಾರೆ ಎಂಬುದನ್ನು ತಾವಡೆ ಅವರು ಗುರುವಾರ ಬೆಳಿಗ್ಗೆ ಪ್ರಕಟಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾ ರಾಷ್ಟ್ರದಲ್ಲಿ ಬಿಜೆಪಿಗೆ ಶಿವಸೇನೆಗಿಂತ ಹೆಚ್ಚಿನ ಸ್ಥಾನ­ಗಳು ದೊರಕಿವೆ. ಇದರಿಂದಾಗಿ ಅಕ್ಟೋಬರ್‌­ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲಿ ಬಿಜೆಪಿಗೆ ಹೆಚ್ಚಿನ ಕ್ಷೇತ್ರಗಳು ದೊರೆಯ­ಬೇಕು ಎಂಬ ಬಯಕೆಯನ್ನು ಬಿಜೆಪಿ ಹೊಂದಿದೆ.

ರಾಹುಲ್‌ ವಿರುದ್ಧ ಕಟಕಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಆಗ ಮಾತನಾಡಿದ್ದಕ್ಕಿಂತ ಹೆಚ್ಚು ಮಾತನಾಡಿದ್ದರೆ ಈಗ ದೊರೆತಿರುವ 44 ಸ್ಥಾನಗಳೂ ದೊರೆಯುತ್ತಿರಲಿಲ್ಲ ಎಂದು ಷಾ ಕಟಕಿಯಾಡಿದ್ದಾರೆ.
‘ರಾಹುಲ್‌ ಗಾಂಧಿ ಮೌನವಾಗಿದ್ದರಿಂದ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದವು ಎಂದು ದಿಗ್ವಿ­ಜಯ್‌ ಸಿಂಗ್‌ ಹೇಳಿದ್ದಾರೆ. ಆದರೆ ರಾಹುಲ್‌ ಹೆಚ್ಚು ಮಾತನಾಡುತ್ತಿದ್ದರೆ ಇಷ್ಟು ಸ್ಥಾನಗಳೂ ದೊರೆಯು ತ್ತಿರಲಿಲ್ಲ’ ಎಂದು ಷಾ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.