ADVERTISEMENT

ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ   

ಚೆನ್ನೈ: ‘ಎಂಜಿನ್‌ರಹಿತ’ ಟ್ರೇನ್‌–18 ಎಂಬ ವಿನೂತನ ರೈಲು ಇದೇ ಜುಲೈಯಲ್ಲಿ ಸಿದ್ಧವಾಗಲಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ರೈಲು ಪ್ರತಿಷ್ಠಿತ ಶತಾಬ್ದಿ ರೈಲಿಗೆ ಪರ್ಯಾಯವಾಗಬಹುದು ಎಂದು ಭಾವಿಸಲಾಗಿದೆ. ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌) ಈ ರೈಲನ್ನು ಸಿದ್ಧಪಡಿಸಿದೆ.

16 ಬೋಗಿಗಳಿರುವ ಮೊದಲ ರೈಲು ದೆಹಲಿ– ಭೋಪಾಲ್‌ ಅಥವಾ ಚೆನ್ನೈ–ಬೆಂಗಳೂರು ನಡುವೆ ಈ ವರ್ಷದ ಕೊನೆಗೆ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಪರೀಕ್ಷಾರ್ಥ ಸಂಚಾರ ನಡೆಯಲಿದೆ.

ಈ ರೈಲಿಗೆ ಪ್ರತ್ಯೇಕವಾದ ಎಂಜಿನ್‌ ಇರುವುದಿಲ್ಲ. ಪ್ರತಿ ಬೋಗಿಯ ಕೆಳಭಾಗದಲ್ಲಿ ಅಳವಡಿಸಲಾಗುವ ಕರ್ಷಣ ಯಂತ್ರ ಬೋಗಿಯನ್ನು ಮುಂದಕ್ಕೆ ಒಯ್ಯುತ್ತದೆ. ಇದು ಸಂಪೂರ್ಣವಾಗಿ ದೇಶೀಯವಾಗಿ ತಯಾರಾಗುತ್ತಿದೆ.

ADVERTISEMENT

‘ಜೂನ್‌ನಲ್ಲಿಯೇ ರೈಲನ್ನು ಸಿದ್ಧಪಡಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಕೆಲವು ಅನಿರೀಕ್ಷಿತ ಸಮಸ್ಯೆಗಳಿಂದಾಗಿ ಗಡುವನ್ನು ಜುಲೈಗೆ ಮುಂದೂಡಲಾಗಿದೆ. ಏನೇ ಆದರೂ ಆಗಸ್ಟ್‌ 15ರೊಳಗೆ ರೈಲು ಸಿದ್ಧವಾಗಲಿದೆ. ನಮ್ಮ ಎಂಜಿನಿಯರ್‌ಗಳೇ ಈ ರೈಲನ್ನು ವಿನ್ಯಾಸ ಮಾಡಿದ್ದಾರೆ. ಇದು ಸಂಪೂರ್ಣವಾಗಿ ದೇಶೀಯ ರೈಲು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು’ ಎಂದು ಐಸಿಎಫ್‌ನ ಪ್ರಧಾನ ವ್ಯವಸ್ಥಾಪಕ ಸುಧಾಂಶು ಮಣಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಟ್ರೇನ್‌–18ರ ಮೊದಲ ಸಂಚಾರ ದೆಹಲಿ–ಭೋಪಾಲ್‌ ಮಾರ್ಗದಲ್ಲಿ ನಡೆಯುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಬೆಂಗಳೂರು–ಚೆನ್ನೈ ಮಾರ್ಗವು ಈ ರೈಲಿನ 160 ಕಿ.ಮೀ. ವೇಗವನ್ನು ತಾಳಿಕೊಳ್ಳುವಷ್ಟು ಗಟ್ಟಿಯಾಗಿಲ್ಲ. ಈ ಮಾರ್ಗದ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ.ಮಾತ್ರ. ಆದರೆ, ಯಾವ ಮಾರ್ಗದಲ್ಲಿ ಮೊದಲ ರೈಲು ಓಡಿಸಬೇಕು ಎಂಬುದನ್ನು ರೈಲ್ವೆ ಮಂಡಳಿಯು ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

**

ಜಿಪಿಎಸ್‌ ಆಧರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ

ಬೋಗಿಗಳ ಒಳಗೆ ಮನರಂಜನಾ ವ್ಯವಸ್ಥೆ

ಗಂಟೆಗೆ 160 ಕಿ.ಮೀ. ವೇಗ

ಸ್ವಯಂಚಾಲಿತ ಬಾಗಿಲು

ತ್ವರಿತವಾಗಿ ವೇಗ ಪಡೆದುಕೊಳ್ಳುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.