ADVERTISEMENT

ವಸ್ತ್ರಸಂಹಿತೆ ಕಾರಣಕ್ಕೆ ಬಿಇಡಿ ಕೋರ್ಸ್‌ ಆಸೆ ಕೈಬಿಟ್ಟ ಮಹಿಳೆ

ಏಜೆನ್ಸೀಸ್
Published 20 ಜುಲೈ 2017, 12:56 IST
Last Updated 20 ಜುಲೈ 2017, 12:56 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಕೋಝಿಕೋಡ್‌: ಕೇರಳದ ಮಲಪ್ಪುರಂ ಜಿಲ್ಲೆಯ ಶಿಕ್ಷಣ ಸಂಸ್ಥೆಯೊಂದರ ವಸ್ತ್ರಸಂಹಿತೆಯ ಕಾರಣದಿಂದ ಮಹಿಳೆಯೊಬ್ಬರು ಬಿಇಡಿ ಕೋರ್ಸ್‌ ಮಾಡುವ ಆಸೆಯನ್ನೇ ಕೈಬಿಟ್ಟಿದ್ದಾರೆ.

ಕೇರಳ ನದುವತ್‌ಉಲ್‌ ಮುಜಾಹಿದ್ದೀನ್‌ (ಕೆಎನ್‌ಎಂ) ಸಂಸ್ಥೆಯ ಅಧೀನದಲ್ಲಿರುವ ಜಾಮಿಯ ನದ್ವಿಯಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಹನ್ಸಾ ಎಂಬುವರು ಬಿಇಡಿ ಕೋರ್ಸ್‌ ಮಾಡಲು ಬಯಸಿದ್ದರು.

ಈ ಶಿಕ್ಷಣ ಸಂಸ್ಥೆಯಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದ್ದು, ‘ಪರದಾ’ ಹಾಕಿಕೊಂಡು ತರಗತಿಗೆ ಬರಲು ಅವಕಾಶವಿಲ್ಲ. ಆದರೆ, ಪರದಾ ಹಾಕಿಕೊಂಡು ಬರಲು ಅವಕಾಶ ಕೊಡಬೇಕೆಂದು ಹನ್ಸಾ ಅವರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಅವಕಾಶ ನೀಡಲು ಸಂಸ್ಥೆ ನಿರಾಕರಿಸಿದೆ.

ADVERTISEMENT

‘ಹನ್ಸಾ ಪರದಾ ಹಾಕಿಕೊಂಡು ಹೋಗುವುದು ಹೆಚ್ಚು ಸುರಕ್ಷಿತ ಎಂದು ನಾವು ತೀರ್ಮಾನಿಸಿದ್ದೆವು. ಆದರೆ, ಶಿಕ್ಷಣ ಸಂಸ್ಥೆ ಇದಕ್ಕೆ ಅವಕಾಶ ನೀಡುತ್ತಿಲ್ಲ. ಸಮವಸ್ತ್ರವಾಗಿ ಸೀರೆ ಉಟ್ಟು ಬರುವಂತೆ ಶಿಕ್ಷಣ ಸಂಸ್ಥೆ ಹೇಳುತ್ತಿದೆ. ಪರದಾ ಹಾಕಿಕೊಂಡು ಹೋಗಲು ವಿಶೇಷ ಅನುಮತಿ ನೀಡುವಂತೆ ನಾವು ಕೆಎನ್‌ಎಂಗೂ ಮನವಿ ಮಾಡಿದ್ದೆವು. ಆದರೆ, ನಮ್ಮ ಮನವಿಯನ್ನು ಸಂಸ್ಥೆ ತಳ್ಳಿಹಾಕಿದೆ’ ಎಂದು ಹನ್ಸಾ ಅವರ ಪತಿ ಹರ್ಷದ್‌ ಮುಹಮ್ಮದ್‌ ತಿಳಿಸಿದ್ದಾರೆ.

‘ಇತರೆ ಮುಸ್ಲಿಂ ಸಂಘಟನೆಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಪರದಾ ಹಾಕಿಕೊಂಡು ತರಗತಿಗೆ ಹೋಗಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಹೀಗಾಗಿ ಜಾಮಿಯ ನದ್ವಿಯಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲೂ ಪರದಾಗೆ ಅವಕಾಶ ನೀಡಬೇಕು ಎಂದು ಕೆಎನ್‌ಎಂಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೆವು. ಆದರೆ, ಅವಕಾಶ ನೀಡಲು ಕೆಎನ್‌ಎಂ ನಿರಾಕರಿಸಿದೆ’ ಎಂದು ಹರ್ಷದ್‌ ಹೇಳಿದ್ದಾರೆ.

ಈ ಎಲ್ಲಾ ಅವಾಂತರಗಳಿಂದ ಬೇಸತ್ತ ಹನ್ಸಾ ಬಿಇಡಿ ಕೋರ್ಸ್‌ನ ಆಸೆಯನ್ನೇ ಕೈ ಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ‘ನಮ್ಮ ಸಂಸ್ಥೆಯಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದೆ. ಒಬ್ಬರಿಗಾಗಿ ನಿಯಮ ಸಡಿಲಿಸಲು ಸಾಧ್ಯವಿಲ್ಲ. ಈಗ ಇವರಿಗಾಗಿ ನಿಯಮದಲ್ಲಿ ಬದಲಾವಣೆ ಮಾಡಿದರೆ, ಮುಂದೆ ಹಲವರು ಇತರೆ ನಿಯಮಗಳನ್ನು ಸಡಿಲಿಸುವಂತೆ ಒತ್ತಾಯ ಮಾಡಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.