ADVERTISEMENT

ವಾಗ್ದಂಡನೆ ಪ್ರಸ್ತಾಪ ವಜಾ: ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ವಾಗ್ದಂಡನೆ ಪ್ರಸ್ತಾಪ ತಿರಸ್ಕರಿಸಿರುವ ನಿರ್ಧಾರವನ್ನು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.

ಕಾನೂನು ಮತ್ತು ಸಂವಿಧಾನ ತಜ್ಞರೊಂದಿಗೆ ಕೇವಲ ಒಂದು ದಿನ ಸಮಾಲೋಚನೆ ನಂತರ ಆತುರದಲ್ಲಿ ವಾಗ್ದಂಡನೆ ತಿರಸ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ನಾಯ್ಡು ವಿರುದ್ಧ ಹರಿಹಾಯ್ದಿದ್ದವು.

ವಿರೋಧ ಪಕ್ಷಗಳ ಆರೋಪ ತಳ್ಳಿ ಹಾಕಿರುವ ನಾಯ್ಡು, ತಜ್ಞರ ಜತೆ ಒಂದು ತಿಂಗಳ ಸಮಾಲೋಚನೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು ಇದು ಆತುರದಲ್ಲಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ವಿರೋಧ ಪಕ್ಷಗಳು ವಾಗ್ದಂಡನೆ ನಿಲುವಳಿ ನೋಟಿಸ್‌ ಸಲ್ಲಿಸುವ ಸಾಕಷ್ಟು ಮೊದಲೇ ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಿರೋಧ ಪಕ್ಷಗಳು ವಾಗ್ದಂಡನೆ ಮಂಡಿಸುವ ಕುರಿತು ಮಾಧ್ಯಮಗಳಿಂದ ಸಾಕಷ್ಟು ಮೊದಲೇ ಸುಳಿವು ದೊರೆತ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆಯಲು ನಾಯ್ಡು ಆರಂಭಿಸಿದ್ದರು ಎಂದು ರಾಜ್ಯಸಭಾ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಆತ್ಮಹತ್ಯಾ ನಡೆ: ನಾಯ್ಡು ಬೆಂಬಲಕ್ಕೆ ನಿಂತಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಭಾಪತಿ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವ ಕಾಂಗ್ರೆಸ್‌ ನಿಲುವನ್ನು ‘ಆತ್ಮಹತ್ಯಾ ನಡೆ’ ಎಂದು ಟೀಕಿಸಿದ್ದಾರೆ.

ನಾಯ್ಡು ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.