ADVERTISEMENT

ವಾದ್ರಾ ವಿರುದ್ಧ ದ್ವೇಷ ಇಲ್ಲ

ಹರಿಯಾಣ ಮುಖ್ಯಮಂತ್ರಿ ಖಟ್ಟರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಚಂಡೀಗಡ (ಐಎಎನ್‌ಎಸ್‌): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವ­ರಿಗೆ ಸಂಬಂಧಿಸಿದ ಭೂ ವ್ಯವಹಾರಗಳ ಬಗ್ಗೆ ನಡೆಸುವ ತನಿಖೆಯಲ್ಲಿ ಯಾವುದೇ ದ್ವೇಷ ಸಾಧನೆ ಇಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ. ಎಲ್ಲವೂ ಕಾನೂನು ಪ್ರಕಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿ­ಯಲ್ಲಿ ನಡೆದ ಭೂ ವ್ಯವಹಾರ­ಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ವಾದ್ರಾ ಅವರಿಗೆ ಸಂಬಂಧಿಸಿದ ಭೂ ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಭಾನುವಾರ ಅಸ್ತಿತ್ವಕ್ಕೆ ಬಂದ ಹರಿಯಾಣ ಸರ್ಕಾರದ ಸಚಿವರು ಹೇಳಿದ್ದರು.

ಭೂಬಳಕೆಯ ಬದಲಾವಣೆಗೆ ಸಂಬಂಧಿಸಿದ ಹಿಂದಿನ ಭೂಪೀಂದರ್‌ ಸಿಂಗ್‌ ಹೂಡಾ ಸರ್ಕಾರದ ನಿರ್ಧಾರ­ಗಳ ಬಗ್ಗೆ ಪ್ರಶ್ನಿಸಿದಾಗಲೂ, ‘ಇಂತಹ ಎಲ್ಲ ದೂರುಗಳಿಗೆ ಸಂಬಂಧಿಸಿಯೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾ­ಗುವುದು’ ಎಂದು ಮುಖ್ಯಮಂತ್ರಿ ಖಟ್ಟರ್‌ ಹೇಳಿದರು.

‘ನನ್ನ ಸರ್ಕಾರ ದ್ವೇಷ ಸಾಧನೆಯ ಉದ್ದೇಶದಿಂದ ಕೆಲಸ ಮಾಡುವುದಿಲ್ಲ. ರಾಜ್ಯದ ಜನರ ಸುಧಾರಣೆ ಕಾರ್ಯ­ಸೂಚಿಯನ್ನು ಅನುಷ್ಠಾನಕ್ಕೆ ತರುವುದೇ ಸರ್ಕಾರದ ಆದ್ಯತೆ’ ಎಂದು ಅವರು ತಿಳಿಸಿದರು. ಹೂಡಾ ಅವಧಿಯ ಭೂ ಹಗರಣ­ಗಳ ಬಗ್ಗೆ ಬಿಜೆಪಿಯ ಹೊಸ ಸರ್ಕಾರ ಮೃದುವಾಗಿದೆ ಎಂದೇ ಈ ಹೇಳಿಕೆ­ಯನ್ನು ವಿಶ್ಲೇಷಿಸಲಾಗಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಭೂ ಹಗರಣಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಿತ್ತು.

ಮಾರ್ಚ್‌ 2005ರಿಂದ ಅಕ್ಟೋಬರ್‌ 2014ರ ವರೆಗಿನ ಹೂಡಾ ಸರ್ಕಾರದ ಅವಧಿಯಲ್ಲಿ ವಾದ್ರಾ ಅವರು ಭೂ ವ್ಯವಹಾರಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.