ADVERTISEMENT

ವಿಚಾರಣೆಗೆ ತಡೆ ‘ಸುಪ್ರೀಂ’ನಿಂದ ತೆರವು

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2014, 19:30 IST
Last Updated 17 ಜೂನ್ 2014, 19:30 IST

ನವದೆಹಲಿ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ತಾನು ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತೆರವುಗೊಳಿಸಿದೆ.

ಕೆಲವು ಆಸ್ತಿಗಳ ಮಾಲೀಕತ್ವ ಕುರಿತ ವಿವಾದಗಳು ಅಧೀನ ನ್ಯಾಯಾಲಯದಲ್ಲಿ  ವಿಚಾರಣೆಗೆ ಬಾಕಿ ಇವೆ. ಇದು ಇತ್ಯರ್ಥವಾಗುವವರೆಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ಮುಂದುವರಿಸಬೇಕು ಎಂದು ಕೋರಿದ್ದ ಜಯಲಲಿತಾ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಂಜಿತ್‌ ಸೆನ್‌ ಮತ್ತು ಎಸ್‌.ಕೆ.ಸಿಂಗ್‌ ಅವರ ನ್ಯಾಯಪೀಠ ವಜಾ ಮಾಡಿದೆ.

ಮುಟ್ಟುಗೋಲು ಆಗಿರುವ ಜಯಲಲಿತಾ ಅವರ ಬೇನಾಮಿ ಆಸ್ತಿಯಲ್ಲಿ ಕೆಲವು ತನಗೆ ಸೇರಿದೆಂದು ಮಾಲೀಕತ್ವದ ಹಕ್ಕು ಪ್ರತಿಪಾದಿಸಿರುವ ಚೆನ್ನೈ ಮೂಲದ ಲೆಕ್ಸ್‌ ಪ್ರಾಪರ್ಟಿ ಡೆವಲಪ್‌ಮೆಂಟ್ ಲಿಮಿಟೆಡ್‌, ಈ ಬಗ್ಗೆ ಅಧೀನ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಈ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಯು 2003ರಲ್ಲೇ ಬೆಂಗಳೂರಿಗೆ ವರ್ಗವಾಗಿತ್ತು. ಆಗ ಜಯಲಲಿತಾ ಅವರು ತಮಿಳುನಾಡು
ಮುಖ್ಯಮಂತ್ರಿಯಾಗಿದ್ದ ಕಾರಣ ಚೆನ್ನೈನಲ್ಲಿ ಈ ಪ್ರಕರಣದ ವಿಚಾರಣೆ ನ್ಯಾಯಸಮ್ಮತವಾಗಿ ಆಗುವುದಿಲ್ಲ. ಆದ್ದರಿಂದ ಇದನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್‌್, ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲು ಸೂಚಿಸಿತ್ತು.

ಜಯಲಲಿತಾ ಅವರು ಬೇನಾಮಿ ಮೂಲಗಳಿಂದ ಅಕ್ರಮವಾಗಿ ₨ 66 ಕೋಟಿ ಬೆಲೆಯ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿಸಲಾದ ಈ ಪ್ರಕರಣದಲ್ಲಿ ವಿ.ಕೆ.ಶಶಿಕಲಾ, ವಿ.ಎನ್‌.ಸುಧಾಕರನ್‌ ಮತ್ತು ಜೆ. ಇಳವರಸಿ ಅವರ ವಿರುದ್ಧವೂ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.