ADVERTISEMENT

ವಿಚಾರಣೆಗೆ ಸುಪ್ರೀಂಕೋರ್ಟ್‌ ತಡೆ

ಸುಬ್ರಮಣಿಯನ್‌ಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಎಐಎಡಿಎಂಕೆ ನಾಯಕಿ ಜೆ.ಜಯ­ಲಲಿತಾ  ಸಲ್ಲಿಸಿದ್ದ ಮಾನನಷ್ಟ ಮೊಕ­ದ್ದಮೆ­ಗಳ  ಸಂಬಂಧ ಕ್ರಮ ಜರುಗಿಸು­ವುದಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ.

ದಂಡನಾ ಕಾನೂನುಗಳಲ್ಲಿ ಅಪ­ರಾಧ ಮಾನನಷ್ಟದ ಅವಕಾಶ­ವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು. ಲಲಿತ್‌ ಅವರನ್ನೊಳಗೊಂಡ ಪೀಠ ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್‌ ನೀಡಿತು.

ಸ್ವಾಮಿ ವಿರುದ್ಧ ಚೆನ್ನೈನ ಸೆಷನ್ಸ್‌ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಎಲ್ಲಾ ಐದು ಮಾನನಷ್ಟ ಮೊಕದ್ದಮೆ­ಗಳ ವಿಚಾರಣೆಗೂ ಸುಪ್ರೀಂ ಕೋರ್ಟ್‌ ತಡೆ ನೀಡಿತು. ಮಾನನಷ್ಟ ಮೊಕದ್ದಮೆ ಹೂಡುವ ಅವಕಾಶವು ವ್ಯಕ್ತಿಯ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವ ಕಾರಣ ಅದು ಅಸಾಂವಿ­ಧಾನಿಕ­ವಾಗುತ್ತದೆ ಎಂದು ಸ್ವಾಮಿ ವಾದಿಸಿ­ದರು.

ಭಾರತೀಯ ದಂಡ ಸಂಹಿತೆ (ಐಪಿಸಿ ಸೆಕ್ಷನ್) 499 ಮತ್ತು 500 ಹಾಗೂ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕ್ರಿಯಾ ಸಂಹಿತೆ 199 (2) ಎಷ್ಟು ನ್ಯಾಯ­ಸಮ್ಮತ ಎಂದೂ ಸ್ವಾಮಿ ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ  ಜಯ­ಲಲಿತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸ್ವಾಮಿ ಅವರ ವಿರುದ್ಧ ಐದು ಮಾನ­ನಷ್ಟ ಮೊಕದ್ದಮೆ­ಗಳನ್ನು ಹೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.