ADVERTISEMENT

ವಿದರ್ಭದ ಕೊರಗೂ ನೇತಾರರ ನಡೆಯೂ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2014, 19:30 IST
Last Updated 9 ಅಕ್ಟೋಬರ್ 2014, 19:30 IST

ನಾಗಪುರ: ಪ್ರತ್ಯೇಕವಾಗುವ ಮುನ್ನ ತೆಲಂಗಾಣದಲ್ಲಿ ಕೇಳಿಸುತ್ತಿದ್ದ ಕೂಗು, ವಿಶೇಷ ಸ್ಥಾನಮಾನ ದೊರೆಯುವ ಮೊದಲು ಹೈದರಾ­ಬಾದ್‌–ಕರ್ನಾಟಕ ಪ್ರದೇಶದಲ್ಲಿದ್ದ ಕೊರಗು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲೂ ಕಿವಿಗೆ ಬೀಳುತ್ತದೆ.

ಆದರೆ ಅದು ಹೊರ ಜಗತ್ತಿಗೆ ದಿನಂಪ್ರತಿ ಕೇಳಿಸುವ ರೀತಿಯಲ್ಲಿ ಜೋರು ಪಡೆದಿಲ್ಲ. ಅಂತರಗಂಗೆಯಂತೆ ಹರಿಯುತ್ತಿದೆ. ‘ಈ ಭಾಗದ ಅಭಿವೃದ್ಧಿಗೆ ಸಿಗಬೇಕಾದ ಪ್ರಾಮುಖ್ಯ ಸಿಕ್ಕಿಲ್ಲ. ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಸರಿಯಾದ ಸ್ಪಂದನ ದೊರೆತಿಲ್ಲ’ ಎಂದು ಜನರು ಪಕ್ಷ­ಭೇದವಿಲ್ಲದೆ ದೂರುತ್ತಾರಾದರೂ ಅಭಿವೃದ್ಧಿ ವಂಚಿತ ಈ ಭಾಗದ ಏಳಿಗೆಗೆ ರಾಜ್ಯ ವಿಭಜನೆಯಷ್ಟೆ ಪರಿಹಾರವೇ ಎಂದು ಪ್ರಶ್ನಿಸಿದರೆ ಭಿನ್ನಸ್ವರಗಳು ಹೊರಡುತ್ತವೆ.

ವಿಧಾನಸಭಾ ಚುನಾವಣೆ ಅಂಗವಾಗಿ ಇಲ್ಲಿನ ಕಸ್ತೂರ್‌ಚಂದ್‌ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಸೂಚಿ ಕುರಿತು ಪ್ರಸ್ತಾಪಿಸಿದರೆ ಅದಕ್ಕೆ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿಲ್ಲ. ಅದೇ ರಾಜಕೀಯ ಟೀಕೆಗಳಿಗೆ ಕೇಕೆ ಹಾಕಿ ಸಂಭ್ರಮಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಹಿಂದುಳಿದ ಪ್ರದೇಶಕ್ಕೂ ಅಭಿವೃದ್ಧಿ ವಿಚಾರ ಬೇಡವಾಯಿತೆ?’ ಎಂದು ನಿವೃತ್ತ ಶಿಕ್ಷಕ ಅನಿಲ್‌ ರಣಜಿತ್‌ ರಾವ್‌ ಅವರನ್ನು ಪ್ರಶ್ನಿಸಿದರೆ, ‘ಅಭಿವೃದ್ಧಿಗೂ ವಿದರ್ಭಕ್ಕೂ ಎತ್ತಣಿಂದ ಎತ್ತ ಸಂಬಂಧ? ಅದಕ್ಕೇ  ಮೌನ ಹೊದ್ದು ಕುಳಿತಿರಬೇಕು’ ಎಂದು ಹತ್ತಾರು ಅರ್ಥಗಳು ಧ್ವನಿಸುವ ರೀತಿ ಪ್ರತಿಕ್ರಿಯಿಸಿದರು.

ಅರವತ್ತೆರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ವಿದರ್ಭ ಪ್ರಾಂತ್ಯ, ನಾಗಪುರ ಮತ್ತು ಅಮರಾವತಿ ಕಂದಾಯ ವಿಭಾಗಗಳಲ್ಲಿ ಹರಡಿದೆ. ಫಲವತ್ತಾದ ಕಪ್ಪು ಮಣ್ಣು, ಹತ್ತಿ ಬೆಳೆಗೆ ಹೇಳಿ ಮಾಡಿಸಿ­ದಂತಿದೆ. ಆದರೆ ಹತ್ತಿ ಬೆಳೆಯೇ ರೈತರನ್ನು ಆತ್ಮಹತ್ಯೆಗೆ ದೂಡಿತು ಎಂಬುದು ಕೃಷಿ ಆರ್ಥಿಕತೆಯ ವೈರುಧ್ಯಕ್ಕೆ ನಿದರ್ಶನ.

ರೈತರ ಆತ್ಮಹತ್ಯೆ ಪ್ರಕರಣಗಳು ಅತಿಹೆಚ್ಚಿಗೆ ವರದಿಯಾಗಿದ್ದು ಇದೇ ಪ್ರದೇಶದಿಂದ. ಇದೇ ಕಾರಣಕ್ಕಾಗಿ 2006ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಇಲ್ಲಿಗೆ ಖುದ್ದು ಭೇಟಿ ಕೊಟ್ಟಿದ್ದರು. ರೈತರ ನೆರವಿಗೆ ವಿಶೇಷ ಪ್ಯಾಕೇಜ್‌ ಕೂಡ ಪ್ರಕಟಿಸಿದ್ದರು. ಈ ಪ್ಯಾಕೇಜಿನಡಿ ಆರು ಜಿಲ್ಲೆಗಳಿಗೆ 3,750 ಕೋಟಿ ರೂಪಾಯಿ ಒದಗಿಸುವುದಾಗಿ ಯುಪಿಎ ಸರ್ಕಾರ ಹೇಳಿತ್ತು. ಆ ನೆರವಿನ ಬಗ್ಗೆ ಈಗ ನೆನೆಯುವವರೇ ಇಲ್ಲ. ಕೇಳಿದರೆ, ‘ಅದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ’ ಎಂಬ ಉತ್ತರ ಸಿಗುತ್ತದೆ.

ಮಹಾರಾಷ್ಟ್ರದ ಎರಡನೇ ರಾಜಧಾನಿ ನಾಗಪುರ. ವಿಧಾನ­ಮಂಡ­ಲದ ಚಳಿಗಾಲದ ಅಧಿವೇಶನ ಇಲ್ಲೇ ನಡೆಯುತ್ತದೆ. ಅದ­ರಿಂದ ಈ ಭಾಗದ ಸಮಸ್ಯೆಗಳ ನಿವಾರಣೆಗೆ ಸಹಾಯವಾಗಿಲ್ಲವೇ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ, ‘ಎರಡು ವಾರಗಳ ಕಾಲ ಇಲ್ಲಿ ಇದ್ದು ಹೋಗುವ ಚುನಾಯಿತ ಪ್ರತಿನಿಧಿಗಳು ನಂತರ ಜಾಣ ಮರೆ­ವಿಗೆ ಜಾರುತ್ತಾರೆ’ ಎಂದು ಪ್ರತಿಕ್ರಿಯಿಸುತ್ತಾರೆ ರತ್ನಾಕರ ಮಾನೆ.
ಹೈದರಾಬಾದ್‌–ಕರ್ನಾಟಕದ ಜತೆ ಕೆಲವೊಂದು ವಿಷಯಗಳಲ್ಲಿ ಹೋಲಿಕೆಗೆ ನಿಲುಕುವ ಪ್ರದೇಶ ವಿದರ್ಭ.

ರಾಜಧಾನಿಯಿಂದ ಇಲ್ಲಿನ ಕೆಲವು ಜಿಲ್ಲಾ ಕೇಂದ್ರಗಳು 1000 ಕಿ.ಮೀ.ಗೂ ಹೆಚ್ಚು ದೂರ­ದಲ್ಲಿವೆ. ಕೆಲವು ಜಿಲ್ಲೆಗಳು ಹಿಂದೆ ಹೈದರಾಬಾದ್‌ ನಿಜಾಮರ ಆಳ್ವಿ­ಕೆಗೆ ಒಳಪಟ್ಟಿದ್ದವು. ವಿದರ್ಭ ಒಂದು ಕಡೆ ತೆಲಂಗಾಣದ ಗಡಿಗೆ ಹೊಂದಿ­ಕೊಂಡಿದೆ. ನಕ್ಸಲೀಯರ ಸಮಸ್ಯೆಯನ್ನೂ ಎದುರಿಸುತ್ತಿದೆ.

ಪ್ರತ್ಯೇಕ ವಿದರ್ಭಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಿಪಡಿಸಿದ್ದ ಬಿಜೆಪಿ, ಮತದಾನಕ್ಕೆ ದಿನಗಣನೆ ಶುರುವಾದ ಪರ್ವ ಘಟ್ಟದಲ್ಲಿ ತನ್ನ ಘೋಷಿತ ನಿಲುವಿನಿಂದ ದಿಢೀರನೆ ಹಿಂದೆ ಸರಿದಿರುವುದು ಈ ಭಾಗದ ಜನ­ರಲ್ಲಿ ಅಚ್ಚರಿ ಮೂಡಿಸಿದೆ. ವಿರೋಧ ಪಕ್ಷಗಳ ಮುಖಂಡರ ಬಾಯಿಗೆ ಆಹಾರವೂ ಆಗಿದೆ. ವಿಭಜನೆ ವಿರೋಧಿ ನಿಲುವು ಹೊಂದಿ­ರುವ ಶಿವಸೇನಾ ಜತೆ ಮೈತ್ರಿ ತುಂಡರಿಸಲು ಪಕ್ಷದ ಈ ಭಾಗದ ಮುಖಂಡರ ಒತ್ತಡವೂ ಒಂದು ಕಾರಣ ಎಂದು ಇಲ್ಲಿನ ಜನ ಮಾತಾ­ಡುತ್ತಾರೆ.

ಆದರೆ ಬಿಜೆಪಿ, ಮಹಾರಾಷ್ಟ್ರವನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಅದೇ ಶಿವಸೇನಾ ಮತ್ತು ಮಹಾರಾಷ್ಟ್ರ ನವ­ನಿರ್ಮಾಣ ಸೇನಾ ನಡೆಸಿದ ವಾಗ್ದಾಳಿಯಿಂದ  ರಾಜ್ಯದ ಉಳಿದ ಭಾಗ­ಗಳಲ್ಲಿ ಹಿನ್ನಡೆ ಆಗಬಹುದು ಎಂದು ಹೆದರಿ ‘ಸಂಯುಕ್ತ ಮಹಾ­ರಾಷ್ಟ್ರ’ ಪರ ಬಿಜೆಪಿ ವಾಲಿದೆಯೇ ಅಥವಾ ಅದೂ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಾಗಪುರದ ಚುನಾವಣಾ ಸಭೆಯಲ್ಲಿ ವಿಭಜನೆ ಕುರಿತಾಗಲೀ, ರಾಜ್ಯವನ್ನು ಅಖಂಡವಾಗಿ ಉಳಿಸುವ ಬಗ್ಗೆಯಾಗಲೀ ಚಕಾರ ಎತ್ತದ ಮೋದಿ ಅವರು, ಸಿಂದ್‌ಖೇಡದಲ್ಲಿ ‘ನಾನು ದೆಹಲಿಯಲ್ಲಿ ಇರುವವರೆಗೂ ಮಹಾರಾಷ್ಟ್ರವನ್ನು ಯಾವ ಶಕ್ತಿಯೂ ಒಡೆಯಲಾರದು’ ಎಂದು ಘೋಷಿಸಿ ತಮ್ಮದೇ ಪಕ್ಷದ ಈ ಭಾಗದ ನಾಯಕರ ಬಾಯಿ ಕಟ್ಟುವಂತೆ ಮಾಡಿದ್ದಾರೆ. ಅದರ ಬೆನ್ನಿಗೇ ‘ಮಹಾರಾಷ್ಟ್ರ ಅಖಂಡವಾಗಿ ಉಳಿಯುತ್ತದೆ...’  ಎಂಬ ಜಾಹೀರಾತು ಪತ್ರಿಕೆಗಳಲ್ಲಿ ರಾರಾಜಿಸಿ, ಪಕ್ಷದ ಬದಲಾದ ನಿಲುವನ್ನು ದೃಢಪಡಿಸಿದೆ. ಆಡಳಿತದ ಅನುಕೂಲಕ್ಕೆ ರಾಜ್ಯಗಳು ಸಣ್ಣದಾಗಿರಬೇಕು ಎಂದು ಪ್ರತಿಪಾದಿಸುತ್ತ ಬಂದಿರುವ ಬಿಜೆಪಿ ನಿಲುವು ಬದಲಾಗಲು ಅತಂತ್ರ ವಿಧಾನಸಭೆಯ ಸುಳಿವು ಕಾರಣ ಇರಬಹುದು ಎಂಬ ಅನುಮಾನವೂ ಮತದಾರರನ್ನು ಕಾಡುತ್ತಿದೆ.

ಈ ಭಾಗ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳ ಸಾಂಘಿಕ ಶಕ್ತಿಯ ಅಭಾವ ಕಾರಣ ಎಂದು ಕೆಲವರಷ್ಟೇ ಗುರುತಿಸುತ್ತಾರೆ. ಹೆಚ್ಚಿನವರು, ಪಶ್ಚಿಮ ಮಹಾರಾಷ್ಟ್ರದ ಮುಖಂಡರ ಕಡೆ ಬೆರಳು ತೋರುತ್ತಾರೆ. ರಾಜ್ಯ ರಾಜಕೀಯದ ಮೇಲೆ ಆ ಭಾಗದ ನಾಯಕರು ಹಿಡಿತ ಸಾಧಿಸಿದ್ದಾರೆ. ಸಂಪನ್ಮೂಲಗಳನ್ನೆಲ್ಲ ಅವರು ಆ ಕಡೆಗೇ ಹರಿಸುತ್ತಿದ್ದಾರೆ ಎಂದು ದೂರುತ್ತಾರೆ. ವಸಂತ್‌ ದಾದಾ ಪಾಟೀಲ್‌, ಶರದ್‌ ಪವಾರ್‌, ಪೃಥ್ವಿರಾಜ್‌ ಚವಾಣ್‌ ಮೊದಲಾದ ಪ್ರಮುಖರು ಆ ಭಾಗದಿಂದಲೇ ಬಂದವರು.

ವಿದರ್ಭ, ಹೇರಳ ಖನಿಜ ಸಂಪತ್ತನ್ನು ಒಡಲಲ್ಲಿ ಇರಿಸಿಕೊಂಡಿದೆ. ವಿದ್ಯುತ್‌ ಉತ್ಪಾದನೆಯ ಶಕ್ತಿಕೇಂದ್ರವೂ ಆಗಿದೆ. ಕಿತ್ತಳೆ, ಹತ್ತಿ ಅಂಥ ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿ. ಆದರೂ ಹಿಂದುಳಿದ ಹಣೆಪಟ್ಟಿ ಅಳಿಸಿಕೊಳ್ಳಲು ಆಗಿಲ್ಲ. ‘ನೀರಾವರಿ ಸೌಲಭ್ಯ ಇಲ್ಲದಿರುವುದು, ಉದ್ಯೋಗಾವಕಾಶಗಳ ಸೃಷ್ಟಿಗೆ ಯತ್ನಿಸದಿರುವುದು, ಮೂಲ ಸೌಕರ್ಯ ವೃದ್ಧಿಗೆ ಗಮನ ಕೊಡದಿರುವುದು ವಿದರ್ಭ ಹಿಂದುಳಿಯಲು ಪ್ರಮುಖ ಕಾರಣ’ ಎನ್ನುತ್ತಾರೆ ವಿದ್ಯುತ್‌ ಕಚೇರಿಯಲ್ಲಿ ನೌಕರಿ ಮಾಡುವ ಯಶವಂತ್‌ ಭೋಸ್ಲೆ.

ತಮ್ಮ ಕೊರಗು ನಿವಾರಿಸುವ ನಾಯಕನ ನಿರೀಕ್ಷೆಯಲ್ಲಿ ಈ ಭಾಗದ ಜನರು ಇದ್ದಾರೆ. ಈ ಚುನಾವಣೆಯಿಂದ ಅದು ಸಾಧ್ಯವಾಗಬಹುದೆ? ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಪಟ್ಟ ಈ ಭಾಗದವರಿಗೇ ಒಲಿಯಬಹುದು. ಆ ಮೂಲಕ ಈ ಭಾಗದ ಅಭಿವೃದ್ಧಿಗೂ ಹೊಸ ಆಯಾಮ ಸಿಗಬಹುದು ಎಂಬ ಸಣ್ಣ ಭರವಸೆ ಜನರಲ್ಲಿ ಮೂಡಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಈ ಭಾಗದವರೇ ಆದ ದೇವೇಂದ್ರ ಫಡ್ನವಿಸ್‌ ಪ್ರಮುಖರು. ಇವರಿಗೆ ಮೋದಿ ಅವರ ಕೃಪೆ ಇದೆ ಎಂದು ಜನ ಮಾತಾಡುತ್ತಾರೆ. ಜನರ ಕೃಪೆ ಯಾರ ಮೇಲಿದೆಯೊ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.